ಬೆಂಗಳೂರು: (No permission yet for Excise counseling- transfers) ಕೌನ್ಸೆಲಿಂಗ್ ಮೂಲಕ ಅಬಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನೂತನವಾಗಿ ಸಿದ್ಧಪಡಿಸಿರುವ ಮಾರ್ಗಸೂಚಿಗಳಿಗೆ 5 ತಿಂಗಳು ಕಳೆದರೂ ಸರ್ಕಾರವು ಅನುಮೋದನೆ ಕೊಟ್ಟಿಲ್ಲ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಗ್ರೂಪ್ ‘ಸಿ’ ವೃಂದದ ಅಬಕಾರಿ ನಿರೀಕ್ಷಕರು, ನಿರೀಕ್ಷಕರು ಸೇರಿ 415 ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಆದರೆ, ಈ ಬಾರಿ ಸರ್ಕಾರ ಅನುಮೋದನೆ ನೀಡದ ಕಾರಣ ಪ್ರಸಕ್ತ ಸಾಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ವೇಳಾಪಟ್ಟಿಗೆ ಅನುಮೋದನೆ ನೀಡುವಂತೆ ಮೇ.14ರಂದು ಅಬಕಾರಿ ಆಯುಕ್ತರ ಕಚೇರಿಯಿಂದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಅನುಮತಿ ಸಿಗದ ಕಾರಣ ವರ್ಗಾವಣೆ ನಿರೀಕ್ಷೆಯಲ್ಲಿರುವ ಅಬಕಾರಿ ಅಧಿಕಾರಿಗಳು ಮತ್ತು ನೌಕರರು ಆತಂಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಚಿವ ಶಿವಲಿಂಗೇಗೌಡ ಅವರನ್ನು ಭೇಟಿ ಮಾಡಿದ್ದ ಅಬಕಾರಿ ನಿರೀಕ್ಷಕ ಸಂಘದ ಪದಾಧಿಕಾರಿಗಳು, ಯಾವುದೇ ಕಾರಣಕ್ಕೂ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಬಾರದು. ಕೌನ್ಸೆಲಿಂಗ್ನಿಂದ ಸಾಕಷ್ಟು ಅಧಿಕಾರಿಗಳಿಗೆ ಅನುಕೂಲವಾಗಿದೆ. ಇದನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ಆದರೂ, ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.
ಕಳೆದ ಮಾರ್ಚ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ನಲ್ಲಿ ಗ್ರೂಪ್ ‘ಬಿ’ ವೃಂದದ ಅಬಕಾರಿ ಉಪ ಅಧೀಕ್ಷಕರು ಮತ್ತು ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಬಾರಿಯ ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಇಲಾಖೆ, ಕೆಲವೊಂದು ನಿಯಮಗಳಿಗೆ ತಿದ್ದುಪಡಿಗೆ ತಂದು ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೂ ಸರ್ಕಾರ ಅನುಮೋದನೆ ಕೊಟ್ಟಿಲ್ಲ. ಇದರ ನಡುವೆ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಹಳ್ಳಹಿಡಿಸಲು ಕೆಲ ಬಲಾಢ್ಯ ಅಧಿಕಾರಿಗಳು ಒಳಗೊಳಗೆ ಕಸರತ್ತು ನಡೆಸುತ್ತಿರುವ ಬಗ್ಗೆ ಗುರುತರ ಆರೋಪಗಳಿವೆ.