ನ್ಯೂಸ್

ಯುಪಿಎಸ್​ಸಿ, ಎಸ್​ಎಸ್​ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್​ಎಸ್​ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್​ಆರ್​ಬಿ) ಮತ್ತು ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಕಳೆದ ವರ್ಷಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವರು ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್​ಟಿಎ) 2024ರ ಮೇ 5ರಂದು ನೀಟ್​​-ಯುಜಿ ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿತ್ತು. ಈ ಕುರಿತು ಜೂನ್ 22 ರಂದು ಕೇಂದ್ರಿಯ ತನಿಖಾ ದಳ (ಸಿಸಿಐ) ಸಮಗ್ರ ತನಿಖೆ ನಡೆಸುತ್ತಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವರು ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ಕಾಯಿದೆ, 2024 ಅನ್ನು ರೂಪಿಸಿದೆ. ಈ ಕಾನೂನಿನ ಅಡಿಯಲ್ಲಿ ನಿಯಮಗಳನ್ನು ಸಹ ಸೂಚಿಸಲಾಗಿದೆ ಎಂದು ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.