ನ್ಯೂಸ್

ಸರಣಿ ಸಭೆಗಳಲ್ಲಿ ಅಭಿಪ್ರಾಯ ಸಂಗ್ರಹಣೆ ಇಲ್ಲ: ವಿಜಯೇಂದ್ರ ಸ್ಪಷ್ಟ ನುಡಿ

ಬೆಂಗಳೂರು: ಪಕ್ಷದ ಸಂಘಟನಾ ಪರ್ವದ ಚಟುವಟಿಕೆಗಳ ಭಾಗವಾಗಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಇಡೀ ದಿನ ಸರಣಿ ಸಭೆಗಳು ನಡೆಯಲಿವೆ. ಅಭಿಪ್ರಾಯಗಳ ಸಂಗ್ರಹಣೆ ಉದ್ದೇಶವಿಲ್ಲ, ಸಂಘಟನಾತ್ಮಕ ಚಟುವಟಿಕೆಗಳು ಬಿಟ್ಟು ಬೇರೆ ವಿಷಯಗಳ ಚರ್ಚೆಗೆ ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ಸುದ್ದಿಗಾರರಿಗೆ ಮಂಗಳವಾರ (ಡಿ.03) ಪ್ರತಿಕ್ರಿಯಿಸಿದ ಅವರು, ಸಂಘಟನಾ ಪರ್ವದ ರಾಜ್ಯ ಉಸ್ತುವಾರಿ, ಪಕ್ಷದ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಸರಣಿ ಸಭೆಗಳಲ್ಲಿ ಪಾಲ್ಗೊಳ್ಳುವರು. ಪಕ್ಷದ ಪ್ರಾಥಮಿಕ ಹಾಗೂ ಸಕ್ರಿಯ ಸದಸ್ಯತ್ವ ಪ್ರಗತಿ, ದತ್ತಾಂಶಗಳ ಅಪ್ ಲೋಡ್ ಕುರಿತು ಮಾಹಿತಿ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಬೂತ್, ಮಂಡಲ ಮತ್ತು ಜಿಲ್ಲಾ ಸಮಿತಿಗಳು ಪುನಾರಚನೆಯಾಗಲಿದ್ದು, ಈ ಚುನಾವಣಾ ಪ್ರಕ್ರಿಯೆಯ ಮಾರ್ಗಸೂಚಿ ವಿವರಿಸಿ, ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಅಹವಾಲು ಸಲ್ಲಿಕೆಗೆ ವೇದಿಕೆಯಲ್ಲ

"ಪಕ್ಷದ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ರನ್ನು ಪಕ್ಷದಿಂದ ಹೊರ ಹಾಕಲು, ಈ ಕುರಿತು ತರುಣ್ ಚುಗ್ ಅವರಿಗೆ ಮನವಿ ಸಲ್ಲಿಸಲು ಜಿಲ್ಲಾ ಘಟಕಗಳ ಅಧ್ಯಕ್ಷರು ನಿರ್ಣಯಿಸಿದ್ದರ ಬಗ್ಗೆ ತಿಳಿದಿಲ್ಲ. ಆದರೆ ಯಾವುದೇ ಮನವಿ ಅಥವಾ ಸಲ್ಲಿಸುವುದಕ್ಕೆ ಇದು ವೇದಿಕೆಯಲ್ಲ" ಎಂದು ಹೇಳಿದರು.

"ಪಕ್ಷದ ಇತ್ತೀಚಿನ ಬೆಳವಣಿಗೆ, ಆಂತರಿಕ ಸಮಸ್ಯೆ ಹಾಗೂ ಅಭಿಪ್ರಾಯ ಸಂಗ್ರಹಿಸುವುದಿದ್ದರೆ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧ ಮೋಹನ್ ದಾಸ್ ಬರುತ್ತಿದ್ದರು.‌ಈ ಸಭೆಗಳಲ್ಲಿ ಸಂಘಟನಾ ಪರ್ವದ ಚಟುವಟಿಕೆಗಳ ಹೊರತಾಗಿ ಬೇರೆ ವಿಷಯಗಳು ಚರ್ಚೆಯಾಗುವುದಿಲ್ಲ" ಎಂದು ಬಿ.ವೈ. ವಿಜಯೇಂದ್ರ ಪುನರುಚ್ಚರಿಸಿದರು.