ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತಿತರ ಆರೋಪಿಗಳು ಸಿಕ್ಕಿಬಿದ್ದಿರುವ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಆಗಿದೆ.
ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದು, ಇದೀಗ ಕಾಂಗ್ರೆಸ್ ನಾಯಕರು ಕೂಡ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಗುರಿಯಾಗಿಸಿ ಟೀಕಿಸಲು ಆರಂಭಿಸಿದ್ದಾರೆ. ಒಬ್ಬ ವ್ಯಕ್ತಿ ಮೋಸ ಹೋಗಿದ್ದಾರೆ ಎನ್ನಲಾದ ಪ್ರಕರಣ ಇದೀಗ ರಾಜಕೀಯ ಜಿದ್ದಾಜಿದ್ದಿನ ಸಂಗತಿಯಾಗಿ ಪರಿಣಮಿಸಿದೆ.
ಬಿಜೆಪಿಯಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಎಂದು ಪ್ರಶ್ನಿಸಿರುವ ಕೆಪಿಸಿಸಿ, "ಸಿಎಂ ಹುದ್ದೆಗೆ 2,500 ಕೋಟಿ, ಮಂತ್ರಿಗಿರಿಗೆ 70 - 80 ಕೋಟಿ, MLA ಟಿಕೆಟ್ಗೆ 7 ಕೋಟಿ!! ಇದೆಲ್ಲವೂ ಬಿಜೆಪಿಯವರಿಂದಲೇ ಬಯಲಾದ ಸತ್ಯಗಳು. ಯತ್ನಾಳ್ ಆಣೆಗೂ ಇದನ್ನು ನಾವು ಹೇಳಿದ್ದಲ್ಲ!" ಎಂದು ಕಾಲೆಳೆದಿದ್ದಾರೆ. ಮಾತ್ರವಲ್ಲ, ಈ ಮಾರಾಟದ ಆಟದಲ್ಲಿ “ವಿರೋಧ ಪಕ್ಷದ ನಾಯಕ”ನ ಹುದ್ದೆಗೆ ಇನ್ನೂ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲವೇ? ಎಂದು ಬಿಜೆಪಿಯವರನ್ನು ಉದ್ದೇಶಿಸಿ ಕರ್ನಾಟಕ ಕಾಂಗ್ರೆಸ್ ಹ್ಯಾಂಡಲ್ನಿಂದ ಎಕ್ಸ್ ಮಾಡಲಾಗಿದೆ.