ತೆಂಗಿನ ಮರ ಹತ್ತಿ ಕಾಯಿ ಕೀಳುವ ರೋಬೋಟ್‌ 
ನ್ಯೂಸ್

ಇನ್ಮುಂದೆ ತೆಂಗಿನ ಮರ ಹತ್ತಲು ಜನ ಬೇಕಿಲ್ಲ; 5 ನಿಮಿಷದಲ್ಲಿ ಕೆಲಸ ಮುಗಿಸುತ್ತೆ ಈ 'CocoBot'! | Coconut Plucking Robot

Kerala Robot: Kerala Robot: ತೆಂಗಿನ ಮರ ಹತ್ತಿ ಕಾಯಿ ಕೀಳಲು ನುರಿತ ಕಾರ್ಮಿಕರ ಕೊರತೆ ಎದುರಾಗುತ್ತಿರುವ ಬೆನ್ನಲ್ಲೇ, ಕೇರಳದ ಸ್ಟಾರ್ಟ್‌ಅಪ್‌ವೊಂದು ಈ ಸಮಸ್ಯೆಗೆ ಪರಿಹಾರವಾಗಿ ಕೊಕೊಬಾಟ್ (CocoBot) ಎಂಬ ಸ್ವಯಂಚಾಲಿತ ರೋಬೋಟ್‌ ಅಭಿವೃದ್ಧಿಪಡಿಸಿದೆ. ಮನುಷ್ಯರಂತೆ ಮರ ಹತ್ತುವ ಈ ರೋಬೋಟ್‌ ಕೇವಲ ಐದು ನಿಮಿಷಗಳಲ್ಲಿ ಕಾಯಿ ಕೀಳುವ ಕೆಲಸ ಮುಗಿಸಬಲ್ಲದು.

ಕೇರಳದ ಕೋಝಿಕ್ಕೋಡ್ ಮೂಲದ ಆಲ್ಟರ್‌ಸೇಜ್ ಇನ್ನೋವೇಷನ್ಸ್(Altersage Innovations) ಎಂಬ ಸ್ಟಾರ್ಟ್‌ಅಪ್‌ ಈ ಕೊಕೊಬಾಟ್‌ ರೋಬೋಟ್‌ ಅನ್ನು ಅಭಿವೃದ್ಧಿಪಡಿಸಿದೆ. ಇದರ ಸಂಸ್ಥಾಪಕ ಮತ್ತು ಸಿಇಒ ಅಶಿನ್ ಪಿ.ಕೃಷ್ಣ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು.

ಕಿಟಕಿಯಿಂದ ನೋಡಿದಾಗ ಹೊಳೆದ ಆಲೋಚನೆ

2020ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಮನೆಯ ಕಿಟಕಿಯಿಂದ ತೆಂಗಿನ ಮರವನ್ನು ನೋಡುತ್ತಿದ್ದ ಅಶಿನ್ ಅವರಿಗೆ, ರೋಬೋಟ್‌ ಮೂಲಕ ಕಾಯಿ ಕೀಳುವ ಆಲೋಚನೆ ಹೊಳೆದಿತ್ತು. ಅದರಂತೆ 2021ರಲ್ಲಿ ಮೊದಲ ಮಾದರಿ ಸಿದ್ಧಪಡಿಸಿ, 2024ರಲ್ಲಿ ಆಲ್ಟರ್‌ಸೇಜ್ ಇನ್ನೋವೇಷನ್ಸ್ ಕಂಪನಿಯನ್ನು ಅಧಿಕೃತವಾಗಿ ಆರಂಭಿಸಿದರು. ತೆಂಗಿನ ಮರ ಹತ್ತುವ ಕಾರ್ಮಿಕರ ಕೊರತೆ ಮತ್ತು ಕೆಲಸದಲ್ಲಿರುವ ಅಪಾಯಕ್ಕೆ ಸುರಕ್ಷಿತ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವುದು ಕಂಪನಿಯ ಉದ್ದೇಶವಾಗಿದೆ.

ಒಂದು ನಿಮಿಷದಲ್ಲಿ 20 ಮೀಟರ್ ಎತ್ತರಕ್ಕೆ ಏರುವ ರೋಬೋಟ್‌

ಕೊಕೊಬಾಟ್‌ನ ವಿಶೇಷತೆ ಅದರ ವೇಗದ ಮರ ಹತ್ತುವ ಸಾಮರ್ಥ್ಯ. ವಿಶೇಷ ಹಿಡಿತದ ಟ್ರ್ಯಾಕ್‌ಗಳ ಮೂಲಕ ನೇರ ಹಾಗೂ ಬಾಗಿದ ತೆಂಗಿನ ಮರಗಳನ್ನು ಗಟ್ಟಿಯಾಗಿ ಹಿಡಿದು ಮೇಲಕ್ಕೆ ಏರುತ್ತದೆ. ಕೇವಲ 10ರಿಂದ 11 ಕೆ.ಜಿ. ತೂಕವಿರುವ ಈ ರೋಬೋಟ್‌ ಅನ್ನು ಒಬ್ಬರೇ ಸುಲಭವಾಗಿ ಹೊತ್ತುಕೊಂಡು ಹೋಗಬಹುದು. ಮರಕ್ಕೆ ಅಳವಡಿಸಿದ ಬಳಿಕ ಒಂದು ನಿಮಿಷದೊಳಗೆ ಸುಮಾರು 20 ಮೀಟರ್‌ (65 ಅಡಿ) ಎತ್ತರಕ್ಕೆ ತಲುಪಬಲ್ಲದು.

ರಿಮೋಟ್‌ ಕಂಟ್ರೋಲ್‌ನಲ್ಲೇ ಕಾಯಿ ಕೀಳಬಹುದು

ಕೊಕೊಬಾಟ್‌ನಲ್ಲಿ ಕ್ಯಾಮೆರಾ ಮತ್ತು ರೋಬೋಟಿಕ್ ಕೈ ಅಳವಡಿಸಲಾಗಿದೆ. ಕ್ಯಾಮೆರಾ ಮೂಲಕ ಮರದ ತುದಿಯಲ್ಲಿರುವ ಕಾಯಿಗಳನ್ನು ಕೆಳಗಿರುವ ಆಪರೇಟರ್ ವೀಕ್ಷಿಸಬಹುದು. ಬಳಿಕ ರಿಮೋಟ್‌ ಕಂಟ್ರೋಲ್‌ ಮೂಲಕ ರೋಬೋಟಿಕ್ ಕೈಯನ್ನು ನಿರ್ವಹಿಸಿ ಬಲಿತ ಕಾಯಿಗಳನ್ನು ಕತ್ತರಿಸಬಹುದು. ಒಣಗಿದ ತೆಂಗಿನ ಗರಿಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವೂ ಇದಕ್ಕಿದೆ. ಒಂದು ಮರ ಹತ್ತಿ ಕಾಯಿ ಕಿತ್ತು ಕೆಳಗಿಳಿಯಲು ಕೇವಲ ಐದು ನಿಮಿಷ ಸಾಕು.

45 ನಿಮಿಷದಲ್ಲಿ ಫುಲ್ ಚಾರ್ಜ್, 90 ನಿಮಿಷ ಕೆಲಸ

ಕೊಕೊಬಾಟ್‌ನಲ್ಲಿ ಫಾಸ್ಟ್‌ ಚಾರ್ಜಿಂಗ್ ಬ್ಯಾಟರಿ ವ್ಯವಸ್ಥೆಯಿದೆ. ಕೇವಲ 45 ನಿಮಿಷಗಳಲ್ಲಿ ಬ್ಯಾಟರಿ ಪೂರ್ಣ ಚಾರ್ಜ್ ಆಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸತತವಾಗಿ 90 ನಿಮಿಷಗಳ ಕಾಲ ಕೆಲಸ ಮಾಡಬಲ್ಲದು. ಕಡಿಮೆ ತೂಕ, ವೇಗವಾಗಿ ಮರ ಹತ್ತುವ ಸಾಮರ್ಥ್ಯ ಮತ್ತು ರಿಮೋಟ್‌ ಮೂಲಕ ಕಾರ್ಯನಿರ್ವಹಿಸುವ ವ್ಯವಸ್ಥೆ ಈ ರೋಬೋಟ್‌ನ ಪ್ರಮುಖ ವಿಶೇಷತೆಗಳಾಗಿವೆ.

ಮುಂದಿನ ಗುರಿ ಏನು?

ಸದ್ಯದ ಕೋಕೋಬಾಟ್ ಜೆನ್-2 ಮಾದರಿಯನ್ನು ಕೆಳಗಿನಿಂದ ಆಪರೇಟರ್ ರಿಮೋಟ್‌ ಮೂಲಕ ನಿಯಂತ್ರಿಸಬೇಕು. ಮುಂದಿನ ಹಂತದಲ್ಲಿ ಎಐ ತಂತ್ರಜ್ಞಾನ ಬಳಸಿ, ಮನುಷ್ಯರ ಸಹಾಯವಿಲ್ಲದೆ ಬಲಿತ ತೆಂಗಿನಕಾಯಿಗಳನ್ನು ಗುರುತಿಸಿ ಕೀಳುವ ಸಂಪೂರ್ಣ ಸ್ವಯಂಚಾಲಿತ ಮಾದರಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದರ ಜತೆಗೆ ಅಡಿಕೆ ಮರ ಹತ್ತುವ ರೋಬೋಟ್‌ ಹಾಗೂ ಮರಗಳಿಗೆ ಔಷಧಿ ಸಿಂಪಡಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ.

ಇದನ್ನೂ ಓದಿ: School Bus Accident: ಮಕ್ಕಳ ಕಿರುಚಾಟ, ಬೆಚ್ಚಿಬಿದ್ದ ಜನ: ಬ್ರೇಕ್ ಫೇಲ್ ಆಗಿ ಗೋಡೆಗೆ ಗುದ್ದಿದ ಸ್ಕೂಲ್ ಬಸ್!

ಒಟ್ಟಿನಲ್ಲಿ, ತೆಂಗಿನಕಾಯಿ ಕೀಳುವ ಕೆಲಸವನ್ನು ಸುಲಭ ಮತ್ತು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಕೇರಳದ ಈ ಸ್ಟಾರ್ಟ್‌ಅಪ್‌ ಹೊಸ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ತೆಂಗು ಬೆಳೆಗಾರರಿಗೆ ಎಷ್ಟು ಉಪಯುಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.