ನ್ಯೂಸ್

12ನೇ ತರಗತಿ ವಿದ್ಯಾರ್ಥಿಗಳಿಗಿಲ್ಲ ಮೊಘಲ್​ ಅಧ್ಯಯನ;ವ್ಯಾಪಕ ಖಂಡನೆ

ಲಖನೌ: NCERT ಪಠ್ಯಕ್ರಮವನ್ನು ಅನುಸರಿಸುವ ಬೋರ್ಡ್​ ಶಾಲೆಗಳಲ್ಲಿ ಮೊಘಲ್ ಇತಿಹಾಸ​ ಅಧ್ಯಯನವನ್ನು ತೆಗೆದು ಹಾಕಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕ್ರಮ ಜಾರಿಗೆ ಬರಲಿದ್ದು NCERT ಪಠ್ಯಕ್ರಮದಲ್ಲಿರುವ ಮೊಘಲ್​ ಇತಿಹಾಸದ ಬಗ್ಗೆ ತೆಗೆದುಹಾಕಿ ಪರ್ಯಾಯಾವಾಗಿ ಬೇರೆ ಪಠ್ಯಕ್ರಮವನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ 12ನೇ ತರಗತಿ ಪಠ್ಯದಲ್ಲಿ ಅಕ್ಬರ್​ ನಾಮ, ಬಾದ್​ಶಾಹ ನಾಮ ಸೇರಿದಂತೆ ಮೊಘಲ್​ ಆಸ್ಥಾನಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದು ಹಾಕಲಾಗುವುದು ಎಂದು ತಿಳಿದು ಬಂದಿದೆ.

11ನೇ ತರಗತಿ ಪಠ್ಯದಲ್ಲಿ ರೈಸ್​ ಆಫ್​ ಇಸ್ಲಾಂ, ಕಲ್​ಚರಲ್​ ಕಾಂಫ್ಲಿಕ್ಟ್​ ಪಾಠಗಳನ್ನು ತೆಗೆದು ಹಾಕಲಾಗಿದೆ. ಅದೇ ರೀತಿ ಕೋಲ್ಡ್​​ ವಾರ್​ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್​​ ಪಾತ್ರದ ಕುರಿತಿನ ಅಧ್ಯಯನಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುಪಿ ಡಿಸಿಎಂ ಕೇಶವ್​ ಪ್ರಸಾದ್​ ಮೌರ್ಯ ವಿದ್ಯಾರ್ಥಿಗಳು ಸತ್ಯವನ್ನು ಅರಿಯಲಿ ಎಂಬ ಕಾರಣಕ್ಕೆ ನಾವು ಇತಿಹಾಸವನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷ, ಎಡಪಂಥೀಯ ಬರಹಗಾರರು ಉತ್ತರಪ್ರದೇಶ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದು ಪಠ್ಯಕ್ರಮದಿಂದ ಪಾಠ ತೆಗೆದು ಹಾಕಿದ ಮಾತ್ರಕ್ಕೆ ಇತಿಹಾಸ ಬದಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.