ಬೆಂಗಳೂರು: 101.3 ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು ಅನ್ನು ಬೆಂಗಳೂರಿನ ಆಕಾಶವಾಣಿ ಜತೆಗೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಈ ವಿಚಾರದ ಕುರಿತಾಗಿ ಈಗಾಗಲೇ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ.
ಹೀಗೆ ವಿಲೀನ ಗೊಳಿಸುವುದರಿಂದ ಹಾಲಿ ನಿರೂಪಕರು ನಿರುದ್ಯೋಗಿಗಳಾಗುತ್ತಾರೆ. ಈ ವಿಚಾರವನ್ನು ಕೈ ಬಿಡಿ. ವಾಹಿನಿಯನ್ನು ಈಗಿರುವ ರೀತಿಯಲ್ಲಿಯೇ ಕಾರ್ಯವಹಿಸುವಂತೆ ಆದೇಶಿಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಕಾಶವಾಣಿ ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು, ರಾಜಭವನ ರಸ್ತೆ, ಬೆಂಗಳೂರು, ಇವರು ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?: ಸದರಿ ರೇನ್ ಬೋ ಕನ್ನಡ ಕಾಮನಬಿಲ್ಲು 101.3ನ್ನು ಬೆಂಗಳೂರಿನ ಆಕಾಶವಾಣಿ ಮುಖ್ಯವಾಹಿನಿಗೆ ವಿಲೀನಗೊಳಿಸುತ್ತಿರುವುದರಿ೦ದ ಕಾರ್ಯಕ್ರಮಗಳು 18 ಗಂಟೆಯಿಂದ 5 ಗಂಟೆಗೆ ಇಳಿಸಿ ಹಾಗೂ ಪ್ರತಿದಿನ 3 ಜನ ನಿರೂಪಕ ಕನ್ನಡ ಆರ್.ಜೆ.ಗಳಿಂದ 1 ಆರ್.ಜೆ.ಗಳಿಗೆ ಇಳಿಸಿ, ಆರ್.ಜೆ. ಗಳಿಗೆ ಕೆಲಸವಿಲ್ಲದೆ ನಿರುದ್ಯೋಗ ವಂಚಿತರಾಗಿದ್ದು, ಹಾಗೂ ಸದರಿ ವಿಲೀನದಿಂದ ಮುಕ್ತಗೊಳಿಸಿ ಈಗಿರುವ ರೀತಿಯಲ್ಲಿಯೇ ಆಕಾಶವಾಣಿ ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು, ಕಾರ್ಯಕ್ರಮ ನಡೆಸಲು ಅನುಮತಿ ಕೊಡಿಸಿಕೊಡುವಂತೆ ಕೋರಲಾಗಿದೆ.
ಅದುದರಿಂದ ಈ ಮನವಿಯನ್ನು ಪರಿಗಣಿಸಿ ಕನ್ನಡ ಆರ್.ಜೆ. ಗಳ ಹಾಗೂ ಕರ್ನಾಟಕದ ಕೇಳುಗರ ಹಿತದೃಷ್ಠಿಯಿಂದ ಆಕಾಶವಾಣಿ ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು ಕಾರ್ಯಕ್ರಮಗಳನ್ನು ಈಗಿರುವ ರೀತಿಯಲ್ಲಿಯೇ ಉಳಿಸಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸುವಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಕೋರಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.