ಬೆಂಗಳೂರು: ಕರೊನಾ ಮೂರನೇ ಅಲೆ ರಾಜ್ಯದಲ್ಲಿ ಉತ್ತುಂಗಕ್ಕೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿಗೊಳ್ಳಬಹುದೆಂಬ ಆತಂಕಕ್ಕೆ ನಿವಾರಣೆಯಾಗಿದೆ. ಲಾಕ್ಡೌನ್ ಜಾರಿ ಅನಗತ್ಯ ಎಂಬ ನಿಲುವು ಹೊಂದಿರುವ ರಾಜ್ಯ ಸರ್ಕಾರ, ಇನ್ನಷ್ಟು ಹೊಸ ನಿರ್ಬಂಧ ಹೇರುವ ವಿಚಾರದಲ್ಲೂ ತರಾತುರಿ ಮಾಡದೆ ಶುಕ್ರವಾರದ ತನಕ ಕಾದು ನೋಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವರು ಹಾಗೂ ತಜ್ಞರ ಸಭೆಯಲ್ಲಿ ವ್ಯಕ್ತವಾದ ಸಲಹೆ ಆಧರಿಸಿ ಕಠಿಣ ನಿಯಮ ಜಾರಿಗೊಳಿಸದಿರಲು ಹಾಗೂ ಸದ್ಯಕ್ಕೆ ಜಾರಿಯಲ್ಲಿರುವ ನಿಯಮಗಳನ್ನೇ ಮುಂದುವರಿಸಲು ನಿರ್ಧಾರವಾಯಿತು.
ಕರೊನಾ 3ನೇ ಅಲೆಯ 90 ದಿನದ ಚಕ್ರದಲ್ಲಿ ಈಗಾಗಲೇ 30 ದಿನ ಕಳೆದಿವೆ. ಇನ್ನು ಎರಡು ವಾರಗಳ (45 ದಿನ) ನಂತರ ಕರೊನಾ ಅಬ್ಬರ ಇಳಿಮುಖವಾಗುತ್ತ ಸಾಗುತ್ತದೆ. ಆಸ್ಪತ್ರೆ ಸೇರುತ್ತಿರುವವರ ಪ್ರಮಾಣ ಕಡಿಮೆ ಇರುವುದರಿಂದ ಆತಂಕ ಪಡುವ ಸ್ಥಿತಿ ಇಲ್ಲ ಎಂಬ ತಜ್ಞರ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಆಧರಿಸಿ ಸರ್ಕಾರ ಈಗಿರುವ ಯಾವುದೇ ನಿರ್ಬಂಧ ಸಡಿಲಿಸುವುದು ಬೇಡ ಹಾಗೂ ಹೊಸ ನಿರ್ಬಂಧ ಹೇರುವುದೂ ಬೇಡ ಎಂದು ನಿರ್ಧರಿಸಿತು. ಬದಲಾಗಿ ಲಸಿಕಾಕರಣದ ವೇಗ ಹೆಚ್ಚಿಸುವುದು, ಜನರ ಆತಂಕ ತಗ್ಗಿಸುವುದು, ಹೋಮ್ ಐಸೋಲೇಷನ್ ಮೇಲೆ ನಿಗಾ, ಔಷಧ ಕಿಟ್ ವಿತರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಹಲವು ಹತ್ತು ಉಪ ಕ್ರಮಗಳನ್ನು ಕೈಗೊಳ್ಳಲು ನಿರ್ಣಯಿಸಿದೆ.
ಹೋಮ್ ಐಸೋಲೇಷನ್ ಕಿಟ್ ಶೀಘ್ರದಲ್ಲಿ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಜತೆಗೆ ಅವರ ಮೇಲೆ ಹೆಚ್ಚು ನಿಗಾ ಇರಿಸಿ ಆತ್ಮಸ್ಥೈರ್ಯ ತುಂಬಲು 5 ರಿಂದ 7 ದಿನದ ಒಳಗೆ 2-3 ಬಾರಿ ಫೋನ್ ಮಾಡಿ ಮಾರ್ಗದರ್ಶನ ನೀಡುತ್ತೇವೆ. ಮಾಸ್ಕ್ ಧರಿಸುವ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ತೀರ್ವನಿಸಿದ್ದೇವೆ. | ಡಾ.ಕೆ. ಸುಧಾಕರ್ ಆರೋಗ್ಯ ಸಚಿವ ಕೆಲ ಜಿಲ್ಲೆಗಳಲ್ಲಿ ಲಸಿಕಾಕರಣ ಹೆಚ್ಚಿಸಲು ಸೂಚಿಸಲಾಗಿದೆ. 21ರ ಸಭೆಯಲ್ಲಿ ನಿರ್ಬಂಧ ಸಡಿಲಿಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸದ್ಯಕ್ಕೆ ಮುಂದುವರಿಯಲಿವೆ. ಇನ್ನಷ್ಟು ನಿರ್ಬಂಧ ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಜನಪರ ತೀರ್ಮಾನ ಕೈಗೊಳ್ಳುತ್ತದೆ. | ಆರ್.ಅಶೋಕ್ ಕಂದಾಯ ಸಚಿವ
ಶಾಲೆಗಳು ಯಥಾಸ್ಥಿತಿ: ಕರೊನಾ ಪ್ರಕರಣ ಹೆಚ್ಚಿರುವ ಕಡೆ ಶಾಲೆಗಳನ್ನು ಮುಚ್ಚಿ ಆನ್ಲೈನ್ ತರಗತಿ ನಡೆಸಲಾಗುತ್ತಿದೆ. ಇನ್ನೂ ಒಂದು ವಾರ ಅದೇ ನಿಯಮ ಮುಂದುವರಿಯಲಿದೆ.
21ಕ್ಕೆ ಮತ್ತೊಂದು ಸಭೆ: ಜ.21ರಂದು ಮತ್ತೊಂದು ಸಭೆ ನಡೆಸಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಮುಂದುವರಿಸುವ ಅಥವಾ ತೆಗೆದು ಹಾಕುವ ಕುರಿತು ತೀರ್ಮಾನ ಕೈಗೊಳ್ಳಲು ಸಭೆ ನಿರ್ಧರಿಸಿತು. ಶುಕ್ರವಾರದ ವೇಳೆಗೆ ಸೋಂಕು ಹೆಚ್ಚಳ ಅಥವಾ ಕಡಿಮೆ ಆಗುವ ಬಗ್ಗೆ ಸ್ಪಷ್ಟತೆ ಬರುವುದರಿಂದ ಅಂದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತೀರ್ವನಿಸಲಾಯಿತು.
·ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಟ್ಟು, ಹೆಚ್ಚು ಸಿಬ್ಬಂದಿ ನಿಯೋಜಿಸುವುದು
·ಜನ ಟ್ರಯಾಜಿಂಗ್ಗೆ ದಾಖಲಾಗುವುದನ್ನು ನಿಯಂತ್ರಿಸುವುದು
·ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಬೇಕು, ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಿ ವಿಶ್ವಾಸ ಮೂಡಿಸುವುದು
·ಹೋಮ್ ಐಸೋಲೇಷನ್ನಲ್ಲಿರುವವರಿಂದ ಮನೆಯ ಇತರರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳುವುದು
·ಔಷಧ ಕಿಟ್ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವುದು
·ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ನಕಾರಾತ್ಮಕ ಮನೋಭಾವ ತೊಡೆದು ಹಾಕುವುದು
·ಕನ್ಸಲ್ಟೇಷನ್ಗೆ ಸ್ಥಳೀಯ ವೈದ್ಯರ ವ್ಯವಸ್ಥೆ ಮಾಡುವುದು
·ಸೋಂಕಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡುವುದು
·ಪಾಲಕರಿಗೆ ಧೈರ್ಯ ಹೇಳಿ ಔಷಧ ಕಿಟ್ ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಕಿಟ್ ಸಿದ್ಧಪಡಿಸುವುದು
·ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸುವುದು
·ಆಕ್ಸಿಜನ್ ಪ್ಲಾಂಟ್ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳುವುದು
·ಆಸ್ಪತ್ರೆಗಳಲ್ಲಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವುದು
·ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸುವುದು
·ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸುವುದು
·ಕೇಂದ್ರದ ನಿಯಮಾವಳಿಗಳಂತೆ ಐ.ಸಿ.ಎಂ.ಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸುವುದು
·ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸುವುದು
·15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವುದು