ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2020) ಅಬಾಧಿತವಾಗಿ ನಿಗದಿಯಂತೆ ನಡೆಯಲಿದೆ.
ಕೋವಿಡ್19 ಹರಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಿಇಟಿ ಪರೀಕ್ಷೆ ನಿಗದಿಪಡಿಸಿ 2020ರ ಮೇ 13 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ.
ಈ ಮೂಲಕ ಜುಲೈ 30, 31 ಹಾಗೂ ಆಗಸ್ಟ್ 1ರಂದು ನಿಗದಿಯಾಗಿದ್ದ ಪರೀಕ್ಷೆ ನಡೆಯುತ್ತೋ, ಇಲ್ಲವೋ ಎಂಬ ಬಗ್ಗೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕ ವಲಯದಲ್ಲಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ನಿನ್ನೆಯಷ್ಟೇ ಹೈಕೋರ್ಟ್ ಸಿಇಟಿ ನಡೆಸುವ ಸಂಬಂಧ ಕೈಗೊಂಡಿರುವ ನಿರ್ಧಾರ ಮರು ಪರಿಶೀಲನೆಗೆ ಸೂಚಿಸಿತ್ತು. ಹೀಗಾಗಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಮಟ್ಟದ ತುರ್ತುಸಭೆ ನಡೆಸಿದ್ದರು.
ಇದನ್ನೂ ಓದಿ; ಉತ್ತಮ ಆಡಳಿತ ವ್ಯವಸ್ಥೆ-ನಿರ್ವಹಣೆ ಶಾಲೆಗಳಿಗೆ ಸಿಗಲಿದೆ ರಾಜ್ಯಮಟ್ಟದ ‘ಸ್ವಾಭಿಮಾನಿ ಸರ್ಕಾರಿ ಶಾಲೆ’ ಪ್ರಶಸ್ತಿ
ಎಲ್ಲ ಜಿಲ್ಲೆ, ಗಡಿನಾಡಿನಲ್ಲೂ ಪರೀಕ್ಷೆ ನಡೆಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಳ್ಳಲಾದ ರೀತಿಯಲ್ಲಿಯೇ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ, ಸಾರಿಗೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳೆಲ್ಲರೂ ಪರೀಕ್ಷೆ ನಡೆಸುವುದಕ್ಕೆ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೇ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು.