ಪುಣ್ಯಕೋಟಿ ದತ್ತು ಯೋಜನೆಕ್ಕಿಲ್ಲ ಅನುದಾನ 
ನ್ಯೂಸ್

ಪುಣ್ಯಕೋಟಿ ದತ್ತು ಯೋಜನೆಗಿಲ್ಲ ಅನುದಾನ: ಹಸಿವಿನಿಂದ ಬಳಲುತ್ತಿವೆ ಜಾನುವಾರುಗಳು- No funds for Punyakoti

ಪುಣ್ಯಕೋಟಿ ದತ್ತು ಯೋಜನೆಯಡಿ 256 ಖಾಸಗಿ ಗೋಶಾಲೆಗಳಿಗೆ 2024-25ರಲ್ಲಿ 3.14 ಕೋಟಿ ಮತ್ತು 2025-26ರಲ್ಲಿ 2.09 ಕೋಟಿ ರೂ.ಬಿಡುಗಡೆಯಾಗಿದೆ. 2023-24ರಲ್ಲಿ 29.03 ಕೋಟಿ ರೂ. ಬಿಡುಗಡೆಯಾಗಿತ್ತು. 2023ನೇ ಸಾಲಿಗೆ ಹೋಲಿಸಿದರೆ ಕಳೆದ ಎರಡು ವರ್ಷದಲ್ಲಿ ಸರ್ಕಾರದ ಅನುದಾನ ಗಣನೀಯವಾಗಿ ಕುಸಿತವಾಗಿದೆ.

ಹರೀಶ್​ ಬೇಲೂರು

(No funds for Punyakoti adoption scheme) ಬಿಡಾಡಿ ದನಗಳು, ಕಸಾಯಿಖಾನೆಗಳಿಗೆ ಸಾಗಾಣಿಕೆಯಾಗುವಂಥ ಗೋವುಗಳು ಮತ್ತು ರಸ್ತೆಗಳಲ್ಲಿ ಆರೈಕೆ ಇಲ್ಲದ ಹಸುಗಳ ಪಾಲನೆಗೆ ರಾಜ್ಯದಲ್ಲಿ ಜಾರಿಗೆ ಬಂದಿರುವ ‘ಪುಣ್ಯಕೋಟಿ ದತ್ತು ಯೋಜನೆ’ ಸೂಕ್ತ ಅನುದಾನ ಸಿಗದೆ ಸೊರಗಿದೆ. ಇದರಿಂದ ಸಮರ್ಪಕವಾಗಿ ಮೇವು, ಹಿಂಡಿ ಸಿಗದೆ ಸಾವಿರಾರು ಜಾನುವಾರುಗಳು ಹಸಿವಿನಿಂದ ಬಳಲುವಂತಾಗಿದೆ. ಮೇವು, ನಿರ್ವಹಣಾ ವೆಚ್ಚಕ್ಕೆ ಸರ್ಕಾರದಿಂದ ಸಿಗಬೇಕಿದ್ದ ಪ್ರೋತ್ಸಾಹ ಹಣ, 2 ವರ್ಷಗಳಿಂದ ಸಿಗದ ಕಾರಣ ಖಾಸಗಿ ಗೋಶಾಲೆಗಳು ಪರದಾಡುತ್ತಿವೆ.

ರಾಜ್ಯದಲ್ಲಿ 36 ಸರ್ಕಾರಿ, 256 ಖಾಸಗಿ ಗೋಶಾಲೆಗಳಿವೆ.ಒಟ್ಟು 51,474 ಜಾನುವಾರುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ನಿರ್ಗತಿಕ ಗೋವು ಸಾಕಲು ಸರ್ಕಾರದಿಂದ ಖಾಸಗಿಯವರಿಗೆ ಅವಕಾಶ ಕೊಟ್ಟಿದೆ. ಎಷ್ಟೇ ಖರ್ಚು ಬಂದರೂ ದಾನಿಗಳ ಹಣದಿಂದ ಗೋವುಗಳ ಲಾಲನೆ, ಪಾಲನೆ ಮಾಡಬೇಕಾದ ಪರಿಸ್ಥಿತಿ ಖಾಸಗಿ ಗೋಶಾಲೆಗಳಿದೆ ದಾನಿಗಳು ನೀಡುವ ಹಣ, ಹಿಂಡಿ, ಮೇವು ಪಡೆದು ಅನಾಥ ಗೋವುಗಳನ್ನು ಸಾಕಿ, ಸಲುಹಲಾಗುತ್ತಿದೆ. ಸಾರ್ವಜನಿಕರ ದೇಣಿಗೆಯಿಂದ ಖಾಸಗಿ ಗೋಶಾಲೆಗಳ ನಿರ್ವಹಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ, ರಾಜ್ಯದಲ್ಲಿ ಮಳೆ ಅಭಾವ ಹಿನ್ನೆಲೆಯಲ್ಲಿ ಈಗಾಗಲೇ ಮೇವು ಕೊರತೆ ಎದುರಾಗಿದ್ದು, ಗೋವುಗಳ ಪರಿಸ್ಥಿತಿ ಹೇಳತೀರದಂತಾಗಿದೆ.

2 ವರ್ಷದಲ್ಲಿ ಬರೀ 5.23 ಕೋಟಿ ಬಿಡುಗಡೆ:

ಪುಣ್ಯಕೋಟಿ ದತ್ತು ಯೋಜನೆಯಡಿ 256 ಖಾಸಗಿ ಗೋಶಾಲೆಗಳಿಗೆ 2024-25ರಲ್ಲಿ 3.14 ಕೋಟಿ ಮತ್ತು 2025-26ರಲ್ಲಿ 2.09 ಕೋಟಿ ರೂ.ಬಿಡುಗಡೆಯಾಗಿದೆ. 2023-24ರಲ್ಲಿ 29.03 ಕೋಟಿ ರೂ. ಬಿಡುಗಡೆಯಾಗಿತ್ತು. 2023ನೇ ಸಾಲಿಗೆ ಹೋಲಿಸಿದರೆ ಕಳೆದ ಎರಡು ವರ್ಷದಲ್ಲಿ ಸರ್ಕಾರದ ಅನುದಾನ ಗಣನೀಯವಾಗಿ ಕುಸಿತವಾಗಿದೆ. ಸಾಕಷ್ಟು ಖಾಸಗಿ ಗೋಶಾಲೆಗಳಿಗೆ ನಯಾಪೈಸೆಯೂ ಅನುದಾನವೂ ಸಿಕ್ಕಿಲ್ಲ. ಮುಂದೆ ಎದುರಾಗುವ ಆರ್ಥಿಕ ಮುಂಗಟ್ಟು ಹಿನ್ನೆಲೆ ಕೆಲವರು, ಪಶುಸಂಗೋಪನೆ ಇಲಾಖೆಯಲ್ಲಿ ನೋಂದಾಯಿಸಿ ಗೋಶಾಲೆ ಆರಂಭಿಸಲು ಹಿಂಜರಿಯುತ್ತಿದ್ದಾರೆ.

ಪ್ರತಿ ತಿಂಗಳಿಗೆ ಬೇಕಿದೆ 7-8 ಲಕ್ಷ ರೂಪಾಯಿ:

ರಾಜ್ಯದ ಗೋಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳು ಬರುತ್ತಿವೆ. ಕೆಲವರು ಗೋಶಾಲೆಗಳ ಬಳಿ ಗಂಡು ಕರು ಬಿಟ್ಟು ಹೋಗುತ್ತಿದ್ದಾರೆ. ಗೋಶಾಲೆಯಲ್ಲಿ ಗೋವುಗಳಿಗೆ ಮೇವು ಒದಗಿಸಲು ಹುಲ್ಲುಗಾವಲು, ಬೇಲಿ ವ್ಯವಸ್ಥೆ, 50,ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್, ವಿದ್ಯುತ್, ಬೋರ್‌ವೆಲ್‌ಗಳ ಮೂಲಕ ನೀರಿನ ವ್ಯವಸ್ಥೆ, ಗೋಕಟ್ಟೆಗಳ ನಿರ್ಮಾಣ, ಮೇವು ಸಂಗ್ರಹಣಾ ಗೋದಾಮು, ಪಶು ವೈದ್ಯಾಧಿಕಾರಿಗಳ ವಸತಿ ಗೃಹ ನಿರ್ಮಿಸಲಾಗಿರುತ್ತದೆ. ತಿಂಗಳಿಗೆ ಪ್ರತಿ ಗೋಶಾಲೆ ನಿರ್ವಹಣೆಗೆ 7-8 ಲಕ್ಷ ರೂ.ಬೇಕಿದೆ. ಸಾಮಾನ್ಯ ಗೋವಿನ ರಕ್ಷಣೆಗೆ ಕನಿಷ್ಠ ದಿನಕ್ಕೆ 150 ರೂ.ಬೇಕಿದೆ. ರಾಸುಗಳಿಗೆ ರಾಗಿ, ಭತ್ತದ ಹುಲ್ಲು, ಮೆಕ್ಕೆಜೋಳ, ಬಿಳಿಜೋಳದ ಸೊಪ್ಪೆ ಅಗತ್ಯವಿದೆ. ಶೇಂಗಾ, ಹತ್ತಿ ಹಿಂಡಿ, ಬೂಸಾ ಸಹ ನೀಡಬೇಕಿದೆ. ಗೋಶಾಲೆಯ ಜಾನುವಾರು ಒಂದಕ್ಕೆ ನಿತ್ಯ 17.50 ರೂ. ಅನುದಾನ ನಿಗದಿಪಡಿಸಲಾಗಿದೆ. ಒಂದು ಜಾನುವಾರಿಗೆ ನಿತ್ಯ ಸರಾಸರಿ ಐದು ಕೆ.ಜಿ. ಮೇವಿನ ಅಗತ್ಯವಿದೆ. ಮಾರುಕಟ್ಟೆ ಬೆಲೆಯಲ್ಲಿ ಮೇವು ಖರೀದಿಸಿ ಗೋಶಾಲೆಗೆ ತರುವಷ್ಟರಲ್ಲಿ ಪ್ರತಿ ಕೆ.ಜಿ. ಮೇವಿಗೆ 4 ರೂ.ತಗುಲುತ್ತಿದೆ. ನೀರು, ವೈದ್ಯಕೀಯ ವೆಚ್ಚ ಸೇರಿ ಇತರ ಸೌಲಭ್ಯಕ್ಕೆ ಪರ್ಯಾಯ ಮಾರ್ಗದಲ್ಲಿ ಹಣ ಹೊಂದಿಸಬೇಕಿದೆ. ಅನುದಾನದ ಮಾನದಂಡ ದಶಕದಿಂದ ಬದಲಾಗಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ ಅನುದಾನ ಸಾಕಾಗುತ್ತಿಲ್ಲ.

ಬಿಜೆಪಿ ಸರ್ಕಾರದ ಅವಧಿಯ ಕೊನೆ ದಿನಗಳಂದು ಪುಣ್ಯಕೋಟಿ ದತ್ತು ಯೋಜನೆ ಶುರುವಾಗಿತ್ತು. ಈ ಯೋಜನೆಗೆ ಎಲ್ಲ ಸರ್ಕಾರಿ ನೌಕರರು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಬೇಕೆಂಬ ನಿಯಮ ಇತ್ತು. ಇದರಲ್ಲಿ ಎಷ್ಟು ನೌಕರರು ಕೊಟ್ಟಿದ್ದಾರೆ ಮತ್ತು ಯಾರ‌್ಯಾರು ಕೊಟ್ಟಿಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪ್ರತಿ ವರ್ಷಕ್ಕೆ ಒಂದು ಗೋಶಾಲೆ ನಿರ್ವಹಣೆಗೆ ಕೋಟ್ಯಂತರ ರೂ. ಬೇಕಿದೆ. ಆದರೆ, ಸರ್ಕಾರ ಕೊಡುವ ಬಿಡುಗಾಸು ಅನುದಾನ ನಮಗೆ ಸಾಕಾಗುತ್ತಿಲ್ಲ. ಸಾಕಷ್ಟು ಸರ್ಕಾರಿ ಗೋಶಾಲೆಗಳಲ್ಲಿ ಗೋವುಗಳಿಲ್ಲ. ಆದರೆ, ಸರ್ಕಾರಿ ಗೋಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಧಿಕಾರಿಗಳು, ಗೋವಿನ ಹೆಸರಿನಲ್ಲಿ ದುಡ್ಡು ಲಪಟಾಯಿಸುತ್ತಿದ್ದಾರೆ. ಯೋಜನೆಗೆ ಮರು ಚಾಲನೆ ನೀಡುವ ಅಗತ್ಯವಿದೆ.

-ಕೆ.ಎನ್. ಶೈಲೇಶ್ ಹೊಳ್ಳ, ಗೋಲೋಕ ಗೋಶಾಲೆಯ ಸಂಸ್ಥಾಪಕ.