40 ಜೀವ ಉಳಿಸಿ ಪ್ರಾಣಬಿಟ್ಟ ರಿಯಲ್ ಹೀರೋ: ಎದೆನೋವಿನ ನಡುವೆಯೂ ಬಸ್ ನಿಲ್ಲಿಸಿ ಕೊನೆಯುಸಿರೆಳೆದ ಚಾಲಕ! APSRTC Bus Driver

ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತವಾದರೂ 40 ಪ್ರಯಾಣಿಕರನ್ನು ರಕ್ಷಿಸಿ ಪ್ರಾಣಬಿಟ್ಟ APSRTC ಚಾಲಕ ಜೆಟ್ಟಿ ಶಿವ. ಕೊನೆ ಕ್ಷಣದಲ್ಲೂ ಸಮಯಪ್ರಜ್ಞೆ ಮೆರೆದ ರಿಯಲ್ ಹೀರೋನ ಮನಕಲಕುವ ಕತೆ ಇಲ್ಲಿದೆ.
APSRTC driver Jetti Shiva (34) saved the lives of 40 people by safely bringing the bus to a halt, even while suffering a severe heart attack.
ತೀವ್ರ ಹೃದಯಾಘಾತದ ನಡುವೆಯೂ ಬಸ್ ಸುರಕ್ಷಿತವಾಗಿ ನಿಲ್ಲಿಸಿ 40 ಜನರ ಪ್ರಾಣ ಉಳಿಸಿದ APSRTC ಚಾಲಕ ಜೆಟ್ಟಿ ಶಿವ (34).
Published on: 

ಅಮರಾವತಿ: ಬಸ್ ಚಲಾಯಿಸುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಚಾಲಕ ಜೆಟ್ಟಿ ಶಿವ (34), ತಮ್ಮ ಜೀವ ಬಿಡುವ ಕೊನೆ ಕ್ಷಣದಲ್ಲೂ ಸಮಯಪ್ರಜ್ಞೆ ಮೆರೆದು ಬಸ್‌ನಲ್ಲಿದ್ದ 40 ಪ್ರಯಾಣಿಕರನ್ನು ಕಾಪಾಡಿದ ಘಟನೆ ಅಮರಾವತಿಯಲ್ಲಿ ವರದಿಯಾಗಿದೆ.

ಕೊನೆ ಕ್ಷಣದಲ್ಲಿ ನಡೆದ ಹೈಡ್ರಾಮಾ!

ಗುರುವಾರ (ಅ 8) ಕಾಕಿನಾಡದಿಂದ ವಿಶಾಖಪಟ್ಟಣಂ ಕಡೆಗೆ ಬಸ್ ಹೊರಟಿತ್ತು. ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಬಸ್ ತುನಿ ಸಮೀಪದ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕ ಜೆಟ್ಟಿ ಶಿವ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಉಸಿರುಕಟ್ಟುವ ಅನುಭವವಾಗಿ, ಕೈಕಾಲುಗಳು ಶಕ್ತಿ ಕಳೆದುಕೊಳ್ಳಲಾರಂಭಿಸಿವೆ.

ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಯಾರೇ ಆದರೂ ನಿಯಂತ್ರಣ ಕಳೆದುಕೊಳ್ಳುವುದು ಸಹಜ. ಬಸ್ ಏನಾದರೂ ಡಿವೈಡರ್‌ಗೆ ಅಪ್ಪಳಿಸಿದರೆ ಅಥವಾ ಪಲ್ಟಿಯಾದರೆ 40 ಜನರ ಸಾವು ಖಚಿತವಾಗಿತ್ತು. ಆದರೆ ಚಾಲಕ ಶಿವ, ಸಾವಿನ ದವಡೆಯಲ್ಲಿದ್ದರೂ ಹೇಗೋ ನಿಯಂತ್ರಣ ಸಾಧಿಸಿ ಬಸ್ಸನ್ನು ನಿಧಾನವಾಗಿ ಹೆದ್ದಾರಿಯ ಬದಿಗೆ ತಂದು ಸೇಫ್ ಆಗಿ ನಿಲ್ಲಿಸಿದ್ದಾರೆ.

ಬಸ್ ನಿಲ್ಲಿಸಿದ ಮರುಕ್ಷಣವೇ ಕುಸಿದುಬಿದ್ದ!

ಬಸ್ ಸಂಪೂರ್ಣವಾಗಿ ನಿಂತು, ಎಂಜಿನ್ ಆಫ್ ಆಗುತ್ತಿದ್ದಂತೆ ಶಿವ ಅವರ ಶಕ್ತಿ ಉಡುಗಿಹೋಯಿತು. ತಕ್ಷಣವೇ ಅವರು ಚಾಲಕನ ಸೀಟಿನಲ್ಲೇ ಪ್ರಜ್ಞಾಹೀನರಾಗಿ ಕುಸಿದುಬಿದ್ದಿದ್ದಾರೆ. ಇದನ್ನು ಕಂಡ ಕಂಡಕ್ಟರ್ ಹಾಗೂ ಪ್ರಯಾಣಿಕರು ಗಾಬರಿಯಿಂದ ಅವರ ಬಳಿ ಓಡಿಬಂದರು. ತಕ್ಷಣ ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಶಿವ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Also Read
‘ದೇಶದಲ್ಲಿ ಅಘೋಷಿತ ಎಮರ್ಜೆನ್ಸಿ!’: CJP ನಾಯಕರ ಬಂಧನಕ್ಕೆ ಸೋನಮ್ ವಾಂಗ್‌ಚುಕ್ ಆಕ್ರೋಶ; ಮತ್ತೊಂದು ಉಪವಾಸ ಸತ್ಯಾಗ್ರಹದ ಎಚ್ಚರಿಕೆ! Sonam Wangchuk
APSRTC driver Jetti Shiva (34) saved the lives of 40 people by safely bringing the bus to a halt, even while suffering a severe heart attack.

ಕಣ್ಣೀರಿಟ್ಟ ಪ್ರಯಾಣಿಕರು: ‘ದೇವರಂತೆ ಬಂದು ಕಾಪಾಡಿದ್ರು’

"ನಮಗೆ ಅವರು ಕೇವಲ ಡ್ರೈವರ್ ಆಗಿರಲಿಲ್ಲ, ದೇವರಂತೆ ಬಂದು ನಮ್ಮ ಜೀವ ಉಳಿಸಿದ್ದಾರೆ. ಆ ನೋವಿನಲ್ಲೂ ಅವರು ಬಸ್ ನಿಲ್ಲಿಸದೇ ಹೋಗಿದ್ದರೆ ಇವತ್ತು ನಾವ್ಯಾರೂ ಬದುಕುಳಿಯುತ್ತಿರಲಿಲ್ಲ. ನಮ್ಮೆಲ್ಲರ ಜೀವ ಉಳಿಸಿ ಅವರು ಹೊರಟುಹೋದರು," ಎಂದು ಪ್ರಯಾಣಿಕರು ಕಣ್ಣೀರಿಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜೆಟ್ಟಿ ಶಿವ ಅವರ ತ್ಯಾಗಕ್ಕೆ ಜನ ಕಂಬನಿ ಮಿಡಿಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರ ಸಾಹಸ ಭಾರಿ ವೈರಲ್ ಆಗುತ್ತಿದೆ.

ಕುಟುಂಬಕ್ಕೆ ನೆರವಿನ ಭರವಸೆ

ಶಿವ ಅವರ ಕರ್ತವ್ಯನಿಷ್ಠೆಗೆ ಆಂಧ್ರಪ್ರದೇಶ ಸಾರಿಗೆ ನಿಗಮದ ಅಧ್ಯಕ್ಷ ಕೊನಕಲ್ಲ ನಾರಾಯಣ ರಾವ್ ತಲೆಬಾಗಿದ್ದಾರೆ. ಶಿವ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಅವರು, "ಅಂತಹ ಗಂಭೀರ ಆರೋಗ್ಯ ತುರ್ತುಸ್ಥಿತಿಯಲ್ಲೂ ಶಿವ ತೋರಿದ ಧೈರ್ಯ, ಸಮಯಪ್ರಜ್ಞೆ ಮತ್ತು ಜವಾಬ್ದಾರಿ ನಿಜಕ್ಕೂ ಬೆಲೆಕಟ್ಟಲಾಗದ್ದು. ತಮ್ಮ ಕೊನೆಯುಸಿರಿನವರೆಗೂ ಪ್ರಯಾಣಿಕರ ರಕ್ಷಣೆಗೆ ನಿಂತ ಶಿವ ಅವರ ಸೇವೆ ಪ್ರತಿಯೊಬ್ಬ ಸಾರಿಗೆ ನೌಕರನಿಗೂ ಸ್ಫೂರ್ತಿ," ಎಂದು ಬಣ್ಣಿಸಿದ್ದಾರೆ.

ಶಿವ ಅವರ ಕುಟುಂಬಕ್ಕೆ ನಿಗಮವು ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲಲಿದೆ. ನಿಯಮಾನುಸಾರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಆರ್ಥಿಕ ಪರಿಹಾರ ಮತ್ತು ನೆರವನ್ನು ಒದಗಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net