ಹಸಿವಿನಿಂದ ಬಳಲುತ್ತಿರುವವರಿಗೆ ಜೀವನಾಧಾರ ರೂಪಿಸಿಕೊಳ್ಳಲು ಉಚಿತ ಆಹಾರಧಾನ್ಯವನ್ನು ಖಾತ್ರಿಪಡಿಸುವುದೇ ಆಹಾರ ಹಕ್ಕು ಕಾಯ್ದೆಯ ಉದ್ದೇಶ. ಯಾರೂ ಹಸಿವಿನಿಂದ ಬಳಲಬಾರದು ಅಥವಾ ಜೀವ ಕಳೆದುಕೊಳ್ಳಬಾರದು ಎಂಬುದು ಈ ಕಾಯ್ದೆಯ ಹಿಂದಿನ ಸದಾಶಯ. ಆದರೆ, ಈ ಆಶಯಕ್ಕೆ ನಮ್ಮ ರಾಜ್ಯದಲ್ಲಿ ಕೊಡಲಿ ಏಟು ಬೀಳುತ್ತಿರುವುದು ದುರದೃಷ್ಟಕರ.
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನವರಿಗೆ ನೀಡುವ ಪಡಿತರ ಚೀಟಿಗಳು ಅನರ್ಹರಿಗೂ ದೊರೆತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇವುಗಳನ್ನು ಪತ್ತೆ ಮಾಡಲು ಕೆಲವು ತಿಂಗಳುಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಲಕ್ಷಾಂತರ ಅನರ್ಹರು ಪಡಿತರ ಚೀಟಿ ಪಡೆದಿರುವುದು ಈವರೆಗಿನ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಎಲಕ್ಕಿಂತ ಮಿಗಿಲಾಗಿ, ಐದು ಸಾವಿರಕ್ಕೂ ಅಧಿಕ ರಾಜ್ಯ ಸರ್ಕಾರಿ ನೌಕರರು ತಮ್ಮ ಆದಾಯದ ಬಗ್ಗೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವುದು ಬೆಳಕಿಗೆ ಬಂದಿದೆ. ಅವರೆಲ್ಲರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ದಂಡ ತೆರುವುದಕ್ಕೂ ತುದಿಗಾಲ ಮೇಲೆ ನಿಂತಿದ್ದಾರೆ. ಹತ್ತಾರು ವರ್ಷಗಳಿಂದ ಇವರೆಲ್ಲರೂ ಬಡವರ ಪಾಲಿನ ಪಡಿತರವನ್ನು ತಾವೇ ಪಡೆದಿರುವುದು ಅಥವಾ ಆ ಪಡಿತರವು ಕಾಳಸಂತೆಗೆ ಸೋರಿಕೆಯಾಗಲು ಅವಕಾಶ ಮಾಡಿಕೊಟ್ಟಿರುವುದು ಸ್ಪಷ್ಟ.
ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಎಷ್ಟು ಜನ ‘ಆರ್ಥಿಕ ಸ್ಥಿತಿವಂತ’ರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿರುವುದು ಪತ್ತೆಯಾಗುತ್ತದೆಯೋ ಕಾದು ನೋಡಬೇಕು. ಇವರೆಲ್ಲ ಈ ರೀತಿ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದರೂ ಆ ಯಾವ ಕಾರ್ಡ್ಗಳನ್ನೂ ರಾಜ್ಯ ಸರ್ಕಾರ ರದ್ದುಪಡಿಸದೇ, ಅವುಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಿರುವುದು ಸರಿಯಲ್ಲ. ಇಂಥವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ ಕೇವಲ ದಂಡ ವಸೂಲಿ ಮಾಡುವುದು ಸೂಕ್ತವಲ್ಲ. ಅವರೆಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು. ಹತ್ತಾರು ವರ್ಷಗಳಿಂದ ಬಡವರ ಪಡಿತರವನ್ನು ಈ ಸ್ಥಿತಿವಂತರು ಪಡೆಯುತ್ತಿದ್ದುದೇ ಅಕ್ಷಮ್ಯ ಅಪರಾಧವಾಗಿದ್ದು, ಈ ತಪ್ಪಿಗೆ ಸರ್ಕಾರ ತಕ್ಕ ಶಾಸ್ತಿ ಮಾಡಬೇಕು. ಆಹಾರ ಹಕ್ಕು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದೇ ಹೋದರೆ ಬಡವರ ಪಡಿತರಕ್ಕೆ ಅನರ್ಹರು ಬಾಯಿ ಹಾಕುತ್ತಲೇ ಇರುತ್ತಾರೆ.
ಆಹಾರ ಹಕ್ಕು ಕಾಯ್ದೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣೆಯ ಸರಕಾಗಿಬಿಟ್ಟಿದೆ. ಉಚಿತವಾಗಿ ಆಹಾರಧಾನ್ಯ ಕೊಡುವ ನೆಪದಲ್ಲಿ ಮತದಾರರನ್ನು ಮರುಳು ಮಾಡುವ ರಾಜಕಾರಣವೂ ನಡೆಯುತ್ತಿದೆ. ಜತೆಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಾರೂಢ ಪಕ್ಷಗಳ ರಾಜಕಾರಣಿಗಳು, ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಜನರು ಪದೇಪದೆ ವಂಚನೆಗೆ ಒಳಗಾಗುತ್ತಿದ್ದಾರೆ. ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿಯಲ್ಲಿ ಪಡಿತರ ವಿತರಣೆಯಾಗುತ್ತಿದೆ. ಒಬ್ಬರು ಕೊಟ್ಟರೆ, ಇನ್ನೊಬ್ಬರು ಕಸಿದುಕೊಳ್ಳುತ್ತಾರೆ. ಹೀಗಾಗಿ ಈ ವಿಷಯ ರಾಜಕೀಯ ಮೇಲಾಟಕ್ಕೆ ಆಸ್ಪದ ನೀಡುತ್ತಿದೆ. ಬಡವರ ಹಸಿವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಅಮಾನವೀಯ ಎಂಬುದನ್ನು ಪಕ್ಷಗಳು ಅರಿತುಕೊಳ್ಳಬೇಕಿದೆ.