ಮುಂಬೈ: ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಮಹಾರಾಷ್ಟ್ರ ಸರ್ಕಾರದ ಸಚಿವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಿನ್ನೆ ನಟಿಯೊಬ್ಬರ ಕುರಿತು ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಸಚಿವರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದು, ಸಾರ್ವಜನಿಕರು ಹಾಗೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಿಎಂ ಏಕನಾಥ್ ಶಿಂಧೆ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ದಾದಾ ಭುಸೆ ಮುಂದಿನ ಕೆಲ ತಿಂಗಳುಗಳ ಕಾಲ ಜನ ಈರುಳ್ಳಿ ಸೇವಿಸದಿದ್ದರೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ.40ರಷ್ಟು ಸುಂಕ ವಿಧಿಸಿರುವುದನ್ನು ಖಂಡಿಸಿ ರೈತರು ಹಾಗೂ ಸಗಟು ವ್ಯಾಪಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಾದಾ ಭುಸೆ ಕೇಂದ್ರ ಸರ್ಕಾರವು ಸರಿಯಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಲೆಏರಿಕೆ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಣೆಗೆ ತರುವ ನಿಟ್ಟಿನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ಸುಂಕ ವಿಧಿಸಿ ಕ್ರಮಕೈಗೊಂಡಿದೆ.
10ಲಕ್ಷ ರೂಪಾಯಿ ಮೌಲ್ಯದ ವಾಹನವನ್ನು ಖರೀದಿಸುವವರಿಗೆ ಈರುಳ್ಳಿ ಬೆಲೆಯಲ್ಲಿ 10 ರಿಂದ 20ರೂಪಾಯಿ ಹೆಚ್ಚಳವಾದರೆ ಯಾವುದೇ ತರಹದಲ್ಲಿ ಹೊರೆಯಾಗುವುದಿಲ್ಲ. ಈರುಳ್ಳಿ ಕೊಳ್ಳಲು ಶಕ್ತರಲ್ಲದವರು ಮುಂದಿನ ಮೂರ್ನಾಲ್ಕು ತಿಂಗಳುಗಳ ಕಾಲ ಅದನ್ನು ಸೇವಿಸಬೇಡಿ ಏನು ವ್ಯತ್ಯಾಸವಾಗುವುದಿಲ್ಲ ಎಂದಿದ್ದಾರೆ.
ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ.40ರಷ್ಟು ಸುಂಕ ವಿಧಿಸಿರುವುದನ್ನು ಖಂಡಿಸಿ ರೈತರು ಹಾಗೂ ಸಗಟು ವ್ಯಾಪಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊಸ ವಿವಾದವನ್ನು ಹುಟ್ಟುಹಾಕಿದ್ದು ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.