ನ್ಯೂಸ್

ಷೇರು ಮಾರುಕಟ್ಟೆಯಲ್ಲಿ ಡೆರಿವೆಟಿವ್​ ಟ್ರೇಡಿಂಗ್ ಬೇಡ: ಚಿಲ್ಲರೆ ಹೂಡಿಕೆದಾರರಿಗೆ ಸೆಬಿ ಮುಖ್ಯಸ್ಥರ ಎಚ್ಚರಿಕೆ

ನವದೆಹಲಿ: ಚಿಲ್ಲರೆ ಹೂಡಿಕೆದಾರರು ಡೆರಿವೆಟಿವ್​ ಟ್ರೇಡಿಂಗ್ (ಹೂಡಿಕೆದಾರರು ಭವಿಷ್ಯದ ಅವಧಿಗಳಿಗೆ ಷೇರುಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು) ಮಾಡದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮುಖ್ಯಸ್ಥ ಆಶಿಶ್‌ಕುಮಾರ್ ಚೌಹಾಣ್ ಅವರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಮ್ಯೂಚುವಲ್ ಫಂಡ್ ಮಾರ್ಗದ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಲು ಅವರು ಸಲಹೆ ನೀಡಿದ್ದಾರೆ.

ಫ್ಯೂಚರ್ಸ್ & ಆಪ್ಶನ್ಸ್ (F&O) ಉತ್ಪನ್ನಗಳ ವ್ಯಾಪಾರವು ಅಪಾಯವನ್ನು ನಿರ್ವಹಿಸುವ ಮತ್ತು ಮಾರುಕಟ್ಟೆಯನ್ನು ಗ್ರಹಿಸುವ ತಿಳಿವಳಿಕೆಯುಳ್ಳ ಹೂಡಿಕೆದಾರರಿಗೆ ಸೀಮಿತವಾಗಿರಬೇಕು ಎಂದು ಅವರು ಹೇಳಿದ್ದಾರೆ.

ಇಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಚೌಹಾಣ್​ ಅವರು, "ಚಿಲ್ಲರೆ ಹೂಡಿಕೆದಾರರು ಫ್ಯೂಚರ್ಸ್ & ಆಪ್ಶನ್ಸ್ ಟ್ರೇಡಿಂಗ್‌ನಲ್ಲಿ ಭಾಗವಹಿಸಬಾರದು. ಅವರು ಮ್ಯೂಚುವಲ್ ಫಂಡ್ ಮಾರ್ಗದ ಮೂಲಕ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬೇಕು" ಎಂದು ತಿಳಿಸಿದ್ದಾರೆ.

ಈ ಉತ್ಪನ್ನಗಳು ತಮ್ಮ ಉಪಯುಕ್ತತೆ ಹೊಂದಿದ್ದರೂ, ಅಪಾಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಮತ್ತು ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇರುವವರು ಮಾತ್ರ ಇದರ ವ್ಯಾಪಾರ ಮಾಡಬೇಕು. ಈ ಕುರಿತು ತಿಳಿವಳಿಕೆ ಅಥವಾ ಅಪಾಯದ ಹಸಿವು ಇಲ್ಲದಿರುವವರು ಇಂತಹ ಉತ್ಪನ್ನಗಳ ವ್ಯಾಪಾರವನ್ನು ತಪ್ಪಿಸಬೇಕು ಎಂದಿದ್ದಾರೆ.

ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಕೂಡ ಚಿಲ್ಲರೆ ಹೂಡಿಕೆದಾರರಿಗೆ ಫ್ಯೂಚರ್ಸ್ & ಆಪ್ಶನ್ಸ್ ವ್ಯಾಪಾರ ಅಪಾಯದ ಬಗೆಗೆ ಎಚ್ಚರಿಕೆ ನೀಡಿದ್ದರು. 2023ರ ನವೆಂಬರ್​ನಲ್ಲಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ಕೂಡ ಹೂಡಿಕೆದಾರರಿಗೆ ಫ್ಯೂಚರ್ಸ್ & ಆಪ್ಶನ್ಸ್​ನಲ್ಲಿ ಬಾಜಿ ಕಟ್ಟುವ ಬಗೆಗೆ ಎಚ್ಚರಿಕೆ ನೀಡಿದ್ದರು.