Narendra Modi: ಭಯೋತ್ಪಾದನೆ ವಿರುದ್ಧ ಭಾರತ ತನ್ನ ರಕ್ಷಣೆಗೆ ಕ್ರಮ ಕೈಗೊಳ್ಳುವುದನ್ನು ಜಗತ್ತಿನ ಯಾವುದೇ ದೇಶ ತಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜುಲೈ29) ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಮಂಗಳವಾರ ಉತ್ತರಿಸಿದ ಪ್ರಧಾನಿ ಮೋದಿ, ಭಾರತ ದಾಳಿ ಮಾಡಿದ ಪಾಕ್ ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ. ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್‌ಗಳು ಇನ್ನೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎಂದರು.
ಭಯೋತ್ಪಾದನೆಯ ವಿರುದ್ಧದ ರಕ್ಷಣೆಗಾಗಿ ಭಾರತ ಯಾವುದೇ ಕ್ರಮ ಕೈಗೊಳ್ಳುವುದಂತೆ ವಿಶ್ವದ ಯಾವುದೇ ದೇಶ ತಡೆದಿಲ್ಲ. ಅಲ್ಲದೆ, ವಿಶ್ವಸಂಸ್ಥೆಯಲ್ಲಿ ಪಾಕ್ ಪರವಾಗಿ ಕೇವಲ 3 ದೇಶಗಳು ಮಾತ್ರ ಮಾತನಾಡಿವೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಕದನ ವಿರಾಮದ ಮಧ್ಯಸ್ಥಿಕೆ; ಟ್ರಂಪ್ ಹೇಳಿಕೆ ನಿರಾಕರಿಸುವಂತೆ ಮೋದಿಗೆ ರಾಹುಲ್ ಸವಾಲ್ | Rahul Gandhi
ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತಕ್ಕೆ ಇಡೀ ಜಗತ್ತಿನಿಂದ ಬೆಂಬಲ ದೊರಕಿತು. ಆದರೆ, ಕಾಂಗ್ರೆಸ್ ನಮ್ಮ ಸೈನಿಕರ ಶೌರ್ಯವನ್ನು ಬೆಂಬಲಿಸದಿರುವುದು ದುರದೃಷ್ಟಕರ. ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ನನ್ನನ್ನು ಗುರಿಯಾಗಿಸಿಕೊಂಡರು. ಕಾಂಗ್ರೆಸ್ ನಾಯಕರು ನೀಡಿದ ಕ್ಷುಲ್ಲಕ ಹೇಳಿಕೆಗಳು ನಮ್ಮ ವೀರ ಸೈನಿಕರನ್ನು ನಿರುತ್ಸಾಹಗೊಳಿಸಿತು ಎಂದು ಕೈ ವಿರುದ್ಧ ಸಂಸತ್ತಿನಲ್ಲಿ ವಿಪಕ್ಷಗಳ ವಿರುದ್ಧ ಮೋದಿ ಟೀಕಾ ಪ್ರಹಾರ ನಡೆಸಿದರು.
ಆಪರೇಷನ್ ಸಿಂಧೂರ ಸಮಯದಲ್ಲಿ ವಿಶ್ವಕ್ಕೆ ಭಾರತದ ಸ್ವಾವಲಂಬಿ ಶಕ್ತಿಯನ್ನು ತೋರಿಸಿದ್ದೇವೆ. ಏಪ್ರಿಲ್ 22ರ ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು ನಾವು ಪಾಕಿಸ್ತಾನದೊಳಗಿನ ಉಗ್ರ ತಾಣಗಳನ್ನು ಕೇವಲ 22 ನಿಮಿಷಗಳಲ್ಲೇ ನಾಶ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಹಲ್ಗಾಮ್ ದಾಳಿ ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸುವ ಪಿತೂರಿಯಾಗಿತ್ತು ಮತ್ತು ದೇಶದ ಏಕತೆ ಧಕ್ಕೆ ತರುವ ಪ್ರಯತ್ನವಾಗಿತ್ತು. ನಾವು ಅದನ್ನು ವಿಫಲಗೊಳಿಸಿದ್ದೇವೆ. ಎಂದು ಮೋದಿ ಗುಡುಗಿದರು.(ಏಜೆನ್ಸೀಸ್)
vijayavani.net/pahalgam-attackers-were-from-pak-we-have-proof-amit-shah-attacks-p-chidambaram-pahalgam-attack