ನ್ಯೂಸ್

ಹಲ್ಲು-ಕೂದಲು ಉದುರಿದರೂ ರಜಿನಿಕಾಂತ್​ ನಟಿಸುತ್ತಿದ್ದಾರೆ ಎಂದ ಡಿಎಂಕೆ ಸಚಿವ; ತಲೈವಾ ಕೊಟ್ಟ ರಿಯಾಕ್ಷನ್​ ವೈರಲ್​

ಚೆನ್ನೈ: 73 ರ ಇಳಿವಯಸ್ಸಿನಲ್ಲೂ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಸ್ಟೈಲ್​ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ರಜಿನಿಕಾಂತ್​ ಈಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಜಿನಿ ಕುರಿತು ತಮಿಳುನಾಡು ಸರ್ಕಾರದ ಸಚಿವ ನೀಡಿರುವ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ರಜಿನಿ ಹಾಗೂ ದೊರೈ ಮುರುಗನ್​ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಇತ್ತೀಚಿಗೆ ಚೆನ್ನೈನಲ್ಲಿ ನಡೆದ ಡಿಎಂಕೆ ಪಕ್ಷದ ಕಾರ್ಯಕ್ರಮದಲ್ಲಿ ನಟ ರಜಿನಿಕಾಂತ್​ ಭಾಗಿಯಾಗಿದ್ದರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಟ ರಜಿನಿಕಾಂತ್​, ತಂದೆ ಕರುಣಾನಿಧಿ ನಿಧನದ ಬಳಿಕ ಪುತ್ರ ಸ್ಟಾಲಿನ್ ಪಕ್ಷವನ್ನು ಮುನ್ನಡೆಸಿದ್ದು ನಿಜಕ್ಕೂ ಗ್ರೇಟ್. ಅಷ್ಟೇ ಅಲ್ಲ, ಪಕ್ಷ ಸಂಘಟಿಸಿ ಸಿಎಂ ಪಟ್ಟಕ್ಕೇರಿದ್ದಾರೆ. ರಾಜ್ಯವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಪಕ್ಷದಲ್ಲಿರುವ ಹಿರಿಯ ಮುಖಂಡರ ಜೊತೆ ಉತ್ತಮ ರೀತಿಯ ಬಾಂಧವ್ಯ ಹೊಂದಿದ್ದು ಪರಸ್ಪರ ಸಹಕಾರದೊಂದಿಗೆ ಸರ್ಕಾರ ನಡೆಸುತ್ತಿದ್ದಾರೆ.

ಯಾವುದೇ ಶಿಕ್ಷಕರಿಗೆ ಹೊಸ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಸುಲಭ. ಆದರೆ ಹಿರಿಯ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಕಷ್ಟ. ಡಿಎಂಕೆ ಪಕ್ಷದಲ್ಲಿ ದೊರೆ ಮುರುಗನ್ ಎನ್ನುವವರು ಇದ್ದಾರೆ. ಅವರ ಬಹಳ ಚಾಲಾಕಿ. ಒಂದು ಕಾಲದಲ್ಲಿ ಕರುಣಾನಿಧಿ ಅವರನ್ನು ಆಡಿಸಿದ್ದವರು ಎಂದು ವ್ಯಂಗ್ಯವಾಡಿದ್ದರು. ಅಂತಹವರ ಜೊತೆ ಸ್ಟಾಲಿನ್ ಏಗುವುದು, ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವುದು ಸವಾಲಿನ ಕೆಲಸ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ದೊರೈ ಮುರುಗನ್​, ರಜಿನಿಕಾಂತ್ ಅವರು ಹಲ್ಲು-ಕೂದಲು ಉದುರಿದ ಬಳಿಕವೂ ನಟನೆ ಮಾಡುತ್ತಿದ್ದಾರೆ. ರಜನಿಕಾಂತ್ ಅಂಥ ವಯಸ್ಸಾದ ನಟರು ಈಗಲೂ ನಟಿಸುತ್ತಿರುವುದಕ್ಕೆ ಯುವ ಕಲಾವಿದರಿಗೆ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಗುತ್ತಿಲ್ಲ ಎಂದು ರಜಿನಿ ಹೇಳಿಕೆಗೆ ತಿರುಗೇಟು ನೀಡಿದ್ದರು.

ಇನ್ನೂ ಮುರುಗನ್​ ಹೇಳಿಕೆಗೆ ಪ್ರತಿಕ್ರಿಯಿಸಿದ ರಜಿನಿ, ಮುರುಗನ್​ ಅವರು ಏನು ಹೇಳಿದರೂ ನನಗೆ ಬೇಸರವಿಲ್ಲ. ಅವರು ನಾನು ಹಳೆಯ ಸ್ನೇಹಿತರು. ಅವರೆಂದರೆ ನನಗೆ ತುಂಬಾ ಇಷ್ಟ. ನಮ್ಮಿಬ್ಬರ ಸ್ನೇಹ ಸದಾ ಮುಂದುವರೆಯುತ್ತದೆ ಎಂದಿದ್ದರು. ರಜಿನಿ ಹೇಳಿಕೆಗೆ ರಿಯಾಕ್ಟ್​ ಮಾಡಿದ್ದ ದೊರೈ ಮುರುಗನ್​, ನಾನು ಕೂಡ ಅದನ್ನೇ ಹೇಳುತ್ತೇನೆ. ನಮ್ಮಿಬ್ಬರ ಜೋಕ್ ಅನ್ನು ಹಗೆತನ ಎಂದುಕೊಳ್ಳಬಾರದು. ನಾವಿಬ್ಬರ ಸ್ನೇಹ ಹಿಂದೆ ಹೇಗಿತ್ತೋ ಅದೇ ರೀತಿ ಮುಂದುವರೆಯುತ್ತದೆ ಎಂದು ಹೇಳಿದ್ದರು.