ನ್ಯೂಸ್

'ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ', ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್​ ಕುಮಾರ್​

Mandara

ಪಟನಾ: ಸಾಮಾನ್ಯವಾಗಿ ರಾಜಕೀಯ ನಾಯಕರು ಚುನಾವಣಾ ಪ್ರಚಾರಗಳಲ್ಲಿ ಮಾತನಾಡುವಾಗ ಸ್ವಲ್ಪ ಹೆಚ್ಚೆನಿಸುವಷ್ಟೇ ಭಾವುಕವಾಗುವುದು ನಮಗೆಲ್ಲ ಗೊತ್ತಿರುವ ವಿಚಾರ. ಅದೇ ರೀತಿ ಬಿಹಾರ ಚುನಾವಣೆಯಲ್ಲಿ ಭಾವುಕ ಭಾಷಣ ಮಾಡಿದ್ದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಇದೀಗ ಉಲ್ಟಾ ಹೊಡೆದಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ನಿತೀಶ್​ ಕುಮಾರ್​, ವೇದಿಕೆಯ ಮೇಲೆ ನಿಂತು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಚುನಾವಣೆ ಮುಗಿದು ಅದರ ಫಲಿತಾಂಶವೂ ಹೊರಬಿದ್ದಿದೆ. ನಿತೀಶ್​ ಕುಮಾರ್​ ಅವರ ಜೆಡಿಯು ಮತ್ತು ಬಿಜೆಪಿ ಪಕ್ಷದ ಮೈತ್ರಿ ಜಯಭೇರಿ ಬಾರಿಸಿದೆ. ಇದೀಗ ತಾವು ರಾಜಕೀಯ ನಿವೃತ್ತಿ ಬಗ್ಗೆ ಮಾತೇ ಆಡಿಲ್ಲ ಎಂದು ನಿತೀಶ್​ ಕುಮಾರ್​ ಹೇಳಿದ್ದಾರೆ.

ನಾನು ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣವನ್ನು ಮಾಧ್ಯಮದವರು ತಪ್ಪಾಗಿ ಗ್ರಹಿಸಿದ್ದಾರೆ. ಒಳ್ಳೆಯದಾಗಿ ಮುಗಿದರೆ ಎಲ್ಲವೂ ಒಳ್ಳೆಯದೇ ಎಂದು ನಾನು ಹೇಳಿದ್ದೆ. ಆದರೆ ಅದನ್ನು ನಾನು ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ ಎಂದು ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಜನತೆ ಬಯಸುವುದಾದರೆ ಇದೇ ಹುಮ್ಮಸ್ಸಿನೊಂದಿಗೆ ಕೆಲಸ ಮುಂದುವರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)