More

    ಲೀಗಲ್ ಹೇರ್​ ಸರ್ಟಿಫಿಕೇಟ್ ಮಾಡಿಸಿಕೊಂಡ್ರೆ ಆಸ್ತಿ ಅವರಿಗೇ ಆಗಿಬಿಡತ್ತಾ?

    ಲೀಗಲ್ ಹೇರ್​ ಸರ್ಟಿಫಿಕೇಟ್ ಮಾಡಿಸಿಕೊಂಡ್ರೆ ಆಸ್ತಿ ಅವರಿಗೇ ಆಗಿಬಿಡತ್ತಾ?ಪ್ರಶ್ನೆ: ನನ್ನ ಹೆಂಡತಿಯ ತಂದೆಗೆ 40 ಎಕರೆ ಜಮೀನು ಇತ್ತು. ಈ ಆಸ್ತಿ ಅವರ ತಂದೆಯಿಂದ ಬಂದಿತ್ತು. ನನ್ನ ಹೆಂಡತಿಗೆ ತಂದೆ, ತಾಯಿ ಇಲ್ಲ. ಇಬ್ಬರು ಸಹೋದರರ ಪೈಕಿ ಒಬ್ಬ ತೀರಿಕೊಂಡಿದ್ದಾರೆ. ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ನನ್ನ ಹೆಂಡತಿಯ ತಮ್ಮ ತನ್ನೊಬ್ಬನ ಹೆಸರಿಗೆ ಲೀಗಲ್ ಹೇರ್​ ಸರ್ಟಿಫಿಕೇಟ್ ಮಾಡಿಸಿಕೊಂಡು ಖಾತೆ ಬದಲಾಯಿಸಿಕೊಂಡಿದ್ದಾನೆ. ಈಗ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾನೆ. ನನ್ನ ಹೆಂಡತಿಗೆ ಆಸ್ತಿಯಲ್ಲಿ ಯಾವ ಭಾಗವೂ ಇಲ್ಲ ಎನ್ನುತ್ತಿದ್ದಾನೆ. ಪರಿಹಾರವೇನು?

    ಉತ್ತರ: ನಿಮ್ಮ ಮಾವನಿಗೆ ಅವರ ತಂದೆಯಿಂದ ಬಂದ ಸ್ವತ್ತು ಅವರ ಪ್ರತ್ಯೇಕ ಸ್ವತ್ತಾಗಿರುತ್ತದೆ. ಇದು ಸ್ವಯಾರ್ಜಿತ ಸ್ವತ್ತಿನ ಎಲ್ಲ ಗುಣಗಳನ್ನೂ ಹೊಂದಿರುತ್ತದೆ. ನಿಮ್ಮ ಮಾವನವರು ತೀರಿಕೊಂಡ ನಂತರ ಈ ಆಸ್ತಿಯಲ್ಲಿ ಹಿಂದೂ ವಾರಸಾ ಕಾಯ್ದೆಯ ಕಲಂ 8ರಂತೆ ನಿಮ್ಮ ಮಾವನ ಹೆಂಡತಿ ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ.

    ಈಗ ನಿಮ್ಮ ಅತ್ತೆ ಕೂಡ ಇಲ್ಲದೇ ಇರುವುದರಿಂದ ಆಸ್ತಿ ಮೂರು ಸಮಭಾಗ ಆಗುತ್ತದೆ. ನಿಮ್ಮ ಪತ್ನಿಗೆ ಒಂದು ಭಾಗ, ಆಕೆಯ ತಮ್ಮನಿಗೆ ಒಂದು ಭಾಗ ಮತ್ತು ನಿಮ್ಮ ಪತ್ನಿಯ ಮೃತ ಸಹೋದರನ ಬಾಬತ್ತು ಒಂದು ಭಾಗ ಹೋಗುತ್ತದೆ. ನಿಮ್ಮ ಪತ್ನಿಯ ಮೃತ ಸಹೋದರನ ಮೂರನೇ ಒಂದು ಭಾಗ ಮತ್ತೆ ಆತನ ಹೆಂಡತಿ ಮತ್ತು ಇಬ್ಬರ ಮಕ್ಕಳಿಗೆ ಸಮವಾಗಿ ಹಂಚಿಕೆ ಆಗುತ್ತದೆ.

    ನಿಮ್ಮ ಪತ್ನಿ ಕೂಡಲೇ ವಿಭಾಗದ ದಾವೆ ಹಾಕಲಿ. ನಿಮ್ಮ ಪತ್ನಿಯ ತಮ್ಮ ಆಸ್ತಿಯನ್ನು ಪರಭಾರೆ ಮಾಡಬಾರದೆಂಬ ತಾತ್ಕಾಲಿಕ ನಿರ್ಬಂಧಕ ಆಜ್ಞೆಯನ್ನು /ಇಂಜಂಕ್ಷನ್ ಆರ್ಡರನ್ನು ಪಡೆದುಕೊಳ್ಳಲಿ. ಕೇಸಿನಲ್ಲಿ ನಿಮ್ಮ ಪತ್ನಿಯ ಮೃತ ಸಹೋದರನ ಹೆಂಡತಿ ಮತ್ತು ಮಕ್ಕಳನ್ನೂ ಪಾರ್ಟಿ ಮಾಡಲಿ. ಕೇಸಿನಲ್ಲಿ ಎಲ್ಲರಿಗೂ ನೋಟಿಸು ಜಾರಿ ಆದ ಮೇಲೆ ಮಧ್ಯಸ್ಥಿಕೆಗೆ ಪ್ರಕರಣವನ್ನು ಕಳಿಸಿಕೊಡಲು ನಿಮ್ಮ ಪತ್ನಿ ಕೇಳಿಕೊಳ್ಳಲಿ.

    ಮಧ್ಯಸ್ಥಿಕೆಯಲ್ಲಿ ಯಾವುದಾದರೂ ಒಂದು ಒಪ್ಪಂದಕ್ಕೆ ಎಲ್ಲರೂ ಬರಬಹುದು. ಇಲ್ಲದೇ ಹೋದರೆ ಕೇಸನ್ನು ಆ ನಂತರ ನಿಮ್ಮ ಪತ್ನಿ ಮುಂದುವರೆಸಲಿ. ಆಕೆಯ ಮೂರನೇ ಒಂದು ಭಾಗಕ್ಕೆ ತೊಂದರೆಯಿಲ್ಲ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿಗಳನ್ನು ನನಗೆ ಬೇಕಾದ ಮಕ್ಕಳಿಗೆ ಮಾತ್ರ ವಿಲ್​ ಮಾಡಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts