ನ್ಯೂಯಾರ್ಕ್ : ಕರೊನಾ ವೈರಸ್ ಸೋಂಕು ತಗುಲಿದೆಯೇ ಎಂದು ಪರೀಕ್ಷಿಸುವುದರೊಂದಿಗೆ ರೂಪಾಂತರಿ ವೈರಸ್ ಉಪಸ್ಥಿತಿಯನ್ನು ಪತ್ತೆ ಹಚ್ಚಲು ಸೀಕ್ವೆಂನ್ಸಿಂಗ್ ಕೂಡ ಮಾಡಬಲ್ಲ ಹೊಸತೊಂದು ಪೋರ್ಟಬಲ್ ಆದ ಟೆಸ್ಟ್ ಕಿಟ್ಅನ್ನು ಅಮೆರಿಕದ ಸಂಶೋಧನಾ ಸಂಸ್ಥೆ ಕಂಡುಹಿಡಿದಿದೆ.
ಈ ಪರೀಕ್ಷೆಗೆ ಒಳಪಟ್ಟರೆ ಕರೊನಾ ಸೋಂಕು ತಗುಲಿದೆಯೋ ಇಲ್ಲವೋ ಮಾತ್ರ ತಿಳಿಯುವುದಿಲ್ಲ. ಅದೇ ರೀತಿಯ ರೋಗಲಕ್ಷಣಗಳನ್ನು ತರಿಸಿ ತಪ್ಪು ಕಲ್ಪನೆಗೆ ದಾರಿ ಮಾಡುವ ಇನ್ಫ್ಲುಯೆಂಜಾ ಇತ್ಯಾದಿ ವೈರಸ್ ಇದೆಯೇ ಎಂಬುದೂ ತಿಳಿಯುತ್ತದೆ. ದುಬಾರಿ ಮೂಲಸೌಕರ್ಯಗಳ ಅಗತ್ಯವಿಲ್ಲದೆ ಸರಳವಾಗಿ ಪಾಕೆಟ್ ಸೈಜ್ ಉಪಕರಣದಿಂದ ಪರೀಕ್ಷೆ ನಡೆಸಬಹುದಾಗಿದೆ ಎಂದು ಆವಿಷ್ಕಾರ ನಡೆಸಿರುವ ಅಮೆರಿಕದ ಸಾಲ್ಕ್ ಇನ್ಸ್ಟಿಟ್ಯೂಟ್ ಫಾರ್ ಬಯಲಾಜಿಕಲ್ ಸ್ಟಡೀಸ್ನ ವಿಜ್ನಾನಿಗಳು ತಿಳಿಸಿದ್ದಾರೆ.
ಮೆಡ್ ಎಂಬ ಜರ್ನಲ್ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ 'ನಿರ್ವಾಣ' ಎಂದು ಹೆಸರಿಸಲಾಗಿರುವ ಈ ಪುಟ್ಟ ಉಪಕರಣವು ಒಂದೇ ಬಾರಿಗೆ 96 ಸ್ಯಾಂಪಲ್ಗಳನ್ನು ಪರೀಕ್ಷಿಸಬಲ್ಲದು. ಜೊತೆಗೆ ಕೋವಿಡ್-19, ಇನ್ಫ್ಲುಯೆಂಜಾ ಎ, ಹ್ಯೂಮನ್ ಅಡಿನೋವೈರಸ್ ಮತ್ತು ನಾನ್-ಸಾರ್ಸ್-ಕೋವ್-2 ಹ್ಯೂಮನ್ ಕರೊನಾ ವೈರಸ್ಗಳ ಪರೀಕ್ಷೆಯನ್ನು ಒಮ್ಮೆಲೇ ಮಾಡಬಲ್ಲದು. ಕೇವಲ 15 ನಿಮಿಷಗಳಲ್ಲಿ ಪಾಸಿಟೀವ್ ಇಲ್ಲ ನೆಗೆಟೀವ್ ಫಲಿತಾಂಶ ಬರುತ್ತದೆ. ಮೂರು ಗಂಟೆಯ ಒಳಗೆ ಎಲ್ಲಾ ವೈರಸ್ನ ಸಾಧ್ಯತೆಯ ಬಗ್ಗೆ ಫಲಿತಾಂಶ ನೀಡುತ್ತದೆ ಎನ್ನಲಾಗಿದೆ.
ಈ ಟೆಸ್ಟ್ನ ಉಪಯುಕ್ತತೆಯನ್ನು ಅದಾಗಲೇ ಪ್ರಾಯೋಗಿಕವಾಗಿ ಕಂಡುಕೊಳ್ಳಲಾಗುತ್ತಿದೆ. ಈಗ ಎರಡು ಅಥವಾ ಮೂರು ಬಾರಿ ಬೇರೆ ಬೇರೆ ಉಪಕರಣಗಳನ್ನು ಬಳಸಿ ಮಾಡುತ್ತಿರುವ ಪರೀಕ್ಷೆಗಳನ್ನು ಒಂದೇ ಪೋರ್ಟಬಲ್ ಟೆಸ್ಟ್ ಕಿಟ್ನಿಂದ ಮಾಡಬಹುದು ಎಂದು ಪ್ರೊ. ಜುವಾನ್ ಕಾರ್ಲೋಸ್ ಇಜ್ಪಿಸುವಾ ಬೆಲ್ಮೊಂಟೆ ಹೇಳಿದ್ದಾರೆ. ಹೀಗಾಗಿ ಶಾಲೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಇದರ ಬಳಕೆಗೆ ಅವಕಾಶವಿದೆ ಎಂದಿದ್ದಾರೆ.
ಹಾಲಿ ಬಳಕೆಯಲ್ಲಿರುವ ಪಿಸಿಆರ್ ಟೆಸ್ಟ್ನಲ್ಲಿ, ಕರೊನಾ ರೀತಿಯ ರೋಗಲಕ್ಷಣಗಳು ಕಂಡುಬಂದವರ ಸ್ವಾಬ್ ಪರೀಕ್ಷೆ ನಡೆಸಿದಾಗ ನೆಗೆಟೀವ್ ವರದಿ ಬಂದರೆ, ಮತ್ತೆ ಬೇರೆ ಯಾವ ವೈರಸ್ನಿಂದ ಈ ಲಕ್ಷಣಗಳು ಕಂಡುಬರುತ್ತಿವೆ ಎಂದು ತಿಳಿಯಲು ಬೇರೆಯೇ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಆದ್ದರಿಂದ 'ನಿರ್ವಾಣ' ಆಲ್-ಇನ್-ಒನ್ ಪರೀಕ್ಷೆಗಾಗಿ ಉಪಯುಕ್ತವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್)