ನ್ಯೂಸ್

ಕೇರಳ ನರ್ಸ್​ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್​! ಯೆಮೆನ್​ ದೇಶ ವಿಧಿಸಿದ್ದ ಗಲ್ಲುಶಿಕ್ಷೆ ರದ್ದು: ವರದಿ | Nimisha Priya

Nimisha Priya: ಪ್ರಸ್ತುತ ಯೆಮನ್‌ ದೇಶದಲ್ಲಿ ಕೊಲೆ ಆರೋಪದಡಿ ಬಂಧನದಲ್ಲಿರುವ ಕೇರಳ ನರ್ಸ್​ ನಿಮಿಷಾ ಪ್ರಿಯಾಳಿಗೆ ಕಡೆಗೂ ಬಿಗ್ ರಿಲೀಫ್​ ಸಿಕ್ಕಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಪ್ರಿಯಾಗೆ ಅಧಿಕೃತವಾಗಿ ಶಿಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿಯ ಹೇಳಿಕೆ ಖಚಿತಪಡಿಸಿದೆ.

ಕಚೇರಿಯ ಅಧಿಕೃತ ಹೇಳಿಕೆಯಲ್ಲಿ, "ಜು.16ಕ್ಕೆ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಈ ಹಿಂದೆ ತಾತ್ಕಾಲಿಕವಾಗಿ ಮುಂದೂಡಿದ್ದ ಮರಣದಂಡನೆಯನ್ನು ಇದೀಗ ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ" ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಿಯಾ ಪುತ್ರಿ ಕಣ್ಣೀರು

ಇನ್ನು ನಿನ್ನೆಯಷ್ಟೇ (ಜು.28) ಯೆಮೆನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾಳ ಪುತ್ರಿ ಮಿಶೆಲ್ (13), ತನ್ನ ತಾಯಿಯ ಬಿಡುಗಡೆಗಾಗಿ ಯೆಮೆನ್​ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಳು. ಖುದ್ದಾಗಿ ಯೆಮೆನ್‌ಗೆ ಆಗಮಿಸಿದ ಮಿಶೆಲ್​, ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಿ ವಿನಂತಿಸಿಕೊಂಡಳು. ತನ್ನ ತಂದೆ ಟಾಮಿ ಥಾಮಸ್ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕರಾದ ಡಾ. ಕೆ.ಎ. ಪಾಲ್ ಅವರೊಂದಿಗೆ, ಯೆಮೆನ್​ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ತನ್ನ ತಾಯಿಯ ಪರವಾಗಿ ಮಿಶೆಲ್​ ಅಂಗಲಾಚಿ ಬೇಡಿಕೊಂಡಳು.

ಹಲವಾರು ವರ್ಷಗಳಿಂದ ಯೆಮೆನ್‌ನಲ್ಲಿ ಜೈಲಿನಲ್ಲೇ ಉಳಿದಿರುವ ತನ್ನ ತಾಯಿಯನ್ನು ನೋಡದ ಮಿಶೆಲ್​, "10 ವರ್ಷಗಳಿಂದ ನಾನು ನಿನ್ನ ಮುಖ ಸಹ ನೋಡಿಲ್ಲ. ನಿನ್ನನ್ನು ತುಂಬ ಪ್ರೀತಿಸುತ್ತೀನಿ ಅಮ್ಮ. ದಯವಿಟ್ಟು ನನ್ನ ತಾಯಿಯನ್ನು ಮನೆಗೆ ಕರೆತರಲು ಸಹಾಯ ಮಾಡಿ. ಅಮ್ಮನನ್ನು ನೋಡಲು ತುಂಬಾ ಆಸೆಯಾಗಿದೆ. ನನ್ನನ್ನು ಬಿಟ್ಟು ಹೋಗಬೇಡ" ಎಂದು ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಭಾವನಾತ್ಮಕ ಪತ್ರ ಕಳುಹಿಸಿದಳು.

ಯಾರು ಈ ನಿಮಿಷಾ ಪ್ರಿಯಾ?

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ, ತನ್ನ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ಬಳಿಕ 2011ರಲ್ಲಿ ಯೆಮೆನ್‌ಗೆ ತೆರಳಿದರು. ವರದಿಗಳ ಪ್ರಕಾರ, ತನ್ನ ಬಡ ಕುಟುಂಬವನ್ನು ಬೆಂಬಲಿಸಲು ದೇಶ ತೊರೆದು ಹೋದ ಪ್ರಿಯಾ, ಅಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ತೆರೆಯುವ ನಿರ್ಧಾರಕ್ಕೆ ಮುಂದಾಗಿದ್ದು ಹಾಗೂ ಅದಕ್ಕೆ ಓರ್ವನ ಸಹಾಯಕ್ಕೆ ಕೈಚಾಚಿದ್ದೇ ಇಂದು ಆಕೆಯ ಗಲ್ಲು ಶಿಕ್ಷೆಗೆ ಕಾರಣವಾಗಿದೆ.

ನಿಮಿಷಾ ಪ್ರಿಯಾ ಕೊಲೆ ಮಾಡಿದ್ದಾದರೂ ಏಕೆ?

2017ರಲ್ಲಿ ತನ್ನ ವ್ಯವಹಾರದ ಪಾಲುದಾರನಾಗಿದ್ದ ವಿವಾಹಿತ ತಲಾಲ್ ಅಬ್ದೋ ಮಹ್ದಿಯನ್ನು ಕೊಲೆಗೈದ ಆರೋಪದಡಿ ಕೇರಳ ಮೂಲದ ನರ್ಸ್​ ನಿಮಿಷಾಳನ್ನು ಬಂಧಿಸಲಾಯಿತು. ಮೂರು ವರ್ಷಗಳ ಬಳಿಕ, 2020ರಲ್ಲಿ ಯೆಮೆನ್ ನ್ಯಾಯಾಲಯವು ಈ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ವಿಧಿಸಿತು. ಈ ಆದೇಶವನ್ನು ಪ್ರಶ್ನಿಸಿ, ಅಂದು ಪ್ರಿಯಾ ತಾಯಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆದರೆ, 2023ರಲ್ಲಿ ಪ್ರೇಮಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಕೊಲೆ ಹಂತಕ್ಕೆ ಹೋಗಿದ್ದೇಕೆ?

ಸಹಾಯ ಮಾಡುವ ನೆಪದಲ್ಲಿ ಪ್ರಿಯಾಳನ್ನು ದುರಪಯೋಗ ಪಡಿಸಿಕೊಳ್ಳಲು ಮುಂದಾದ ಮಹ್ದಿ, ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಆಕೆಗೆ ಒತ್ತಾಯಿಸಿದ್ದ. ವಿಪರೀತ ಹಿಂಸೆಯ ಬೆನ್ನಲ್ಲೇ ಆಕೆ ಮಹ್ದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಂಧಿತನಾಗಿದ್ದ ಮಹ್ದಿ, 2016ರಲ್ಲಿ ಜೈಲಿನಿಂದ ಹೊರಬಂದ. 2017ರಲ್ಲಿ ಆಕೆಗೆ ಇನ್ನಷ್ಟು ಹಿಂಸೆ ಕೊಡಲು ಮುಂದಾದ ಎಂದು ವರದಿಗಳು ತಿಳಿಸಿವೆ. ಮಹ್ದಿ, ಪ್ರಿಯಾ ಬಳಿಯಿದ್ದ ಪಾಸ್‌ಪೋರ್ಟ್ ಅನ್ನು ಕಸಿದುಕೊಂಡಿದ್ದ. ಇದರಿಂದ ಕಂಗಾಲಾಗಿದ್ದ ಪ್ರಿಯಾ, ಆತನಿಂದ ಪಾಸ್​ಪೋರ್ಟ್​ ಪಡೆದು ಭಾರತಕ್ಕೆ ಹೋಗುವ ತವಕದಲ್ಲಿದ್ದಳು. ಇವನಿಂದ ಹೇಗಾದರೂ ಮುಕ್ತಿ ಪಡೆಯಬೇಕು ಎಂದು ಸಂಚು ರೂಪಿಸಿದ ಪ್ರಿಯಾ, ಮಹ್ದಿಗೆ ನಿದ್ರಾಜನಕ ನೀಡಿದ್ದಳು. ಆದರೆ, ಓವರ್​ಡೋಸ್​ನಿಂದ ಆತ ಸತ್ತುಬಿದ್ದಿದ್ದ.

ಕೊಲೆಗೈದ ಬಳಿಕ ಹೇಗೋ ದೇಹವನ್ನು ತನ್ನ ಸ್ನೇಹಿತೆಯೊಂದಿಗೆ ವಿಲೇವಾರಿ ಮಾಡಿದ್ದ ಪ್ರಿಯಾ, ಕಡೆಗೂ ಕೊಲೆ ಆರೋಪದಡಿ ಸಿಕ್ಕಿಬಿದ್ದಳು. ಈ ವೇಳೆ ಆಕೆಯ ಕೈವಾಡ ಇರುವುದು ದೃಢವಾಯಿತು. ಹತ್ಯೆ ಕೇಸ್​ನಡಿ ಯೆಮೆನ್ ಪೊಲೀಸರು ಆಕೆಯನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಕೋರ್ಟ್​ ಪ್ರಿಯಾಳ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪ್ರಿಯಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಜುಲೈ 16ರಂದು ಮರಣದಂಡನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೀಗ ಅದು ಮುಂದೂಡಿಕೆಯಾಗಿದೆ,(ಏಜೆನ್ಸೀಸ್).