ನವದೆಹಲಿ: ಲಿವ್ ಇನ್ ಸಂಗಾತಿಯನ್ನು ಹತ್ಯೆ ಮಾಡಿ, ಶವವನ್ನು ಫ್ರಿಜ್ನಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಆರೋಪಿಗೆ ಆತನ ತಂದೆಯೇ ಸಹಾಯ ಮಾಡಿರುವುದು ಬೆಳಕಿಗೆ ಬಂದಿದ್ದು, ಇದೀಗ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಾಹಿಲ್ ಗೆಹ್ಲೋಟ್ (24) ಎಂಬಾತ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ನಿಕ್ಕಿ ಯಾದವ್ಳನ್ನು ಕೊಂದು ಮೃತದೇಹವನ್ನು ರೆಫ್ರಿಜರೇಟರ್ನಲ್ಲಿ ಇಟ್ಟಿದ್ದ. ಅಲ್ಲದೇ ಮರು ದಿನವೇ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಈ ಪ್ರಕರಣ ಫೆ. 14ರಂದು ಬೆಳಕಿಗೆ ಬಂದಿತು.
ಇದುವರೆಗೂ ಈ ಪ್ರಕರಣದಲ್ಲಿ ಸಾಹಿಲ್ ಗೆಹ್ಲೋಟ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಸಾಹಿಲ್ ತಂದೆಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ರವಿಂದರ್ ಯಾದವ್ ತಿಳಿಸಿದ್ದಾರೆ.
ಇನ್ನೊಂದು ಪ್ರಮುಖ ಮಾಹಿತಿ ಬಹಿರಂಗವಾಗಿದ್ದು, 2020ರ ಅಕ್ಟೋಬರ್ನಲ್ಲೇ ಸಾಹಿಲ್ ಮತ್ತು ನಿಕ್ಕಿ ಇಬ್ಬರು ನೋಯ್ಡಾ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ನಿಕ್ಕಿ ಜೊತೆಗಿನ ಸಂಬಂಧ ಸಾಹಿಲ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ಬೇರೊಂದು ಯುವತಿಯ ಜೊತೆ ಮದುವೆ ನಿಗದಿ ಮಾಡಿದ್ದರು. ಆದರೆ, ಈ ಸಂಗತಿ ನಿಕ್ಕಿಗೆ ತಿಳಿದಿರಲಿಲ್ಲ. ಮದುವೆ ಇನ್ನೊಂದು ದಿನ ಬಾಕಿ ಇರುವಾಗ ನಿಕ್ಕಿಗೆ ಸಾಹಿಲ್ ಮದುವೆ ಬಗ್ಗೆ ತಿಳಿಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆಯ ಸಮಯದಲ್ಲಿ ನಿಕ್ಕಿ ಯಾದವ್ ನೈಋತ್ಯ ದೆಹಲಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫೆಬ್ರವರಿ 9ರ ವೀಡಿಯೊದಲ್ಲಿ ನಿಕ್ಕಿ ಮನೆಯಲ್ಲಿ ಒಬ್ಬಂಟಿಯಾಗಿರುವುದು ಕಂಡುಬಂದಿದೆ.
ನಿಕ್ಕಿಯ ಹತ್ಯೆಗೂ ಮುನ್ನ ನಡೆದ ತನ್ನದೇ ನಿಶ್ಚಿತಾರ್ಥ ಕಾರ್ಯಕ್ರಮದ ಬಳಿಕ ಆರೋಪಿ ಗೆಹ್ಲೋಟ್ ಉತ್ತಮ ನಗರದಲ್ಲಿರುವ ನಿಕ್ಕಿ ಯಾದವ್ ಬಾಡಿಗೆ ಮನೆಗೆ ತೆರಳಿ ನೆಲೆಸಿದ್ದ. ಈ ವೇಳೆ ಫೆ. 10ರಂದು ಬೇರೊಬ್ಬಳ ಜೊತೆ ನಿಗದಿಯಾಗಿದ್ದ ಮದುವೆಗೂ ಮುನ್ನ ಯಾದವ್ಗಳನ್ನು ಪ್ರವಾಸಕ್ಕೆ ಕರೆದೊಯ್ಯಲು ಪ್ಲಾನ್ ಮಾಡಿದ್ದ. ಲಿವ್-ಇನ್ ಸಂಗಾತಿಯೊಂದಿಗೆ ಮುಂದುವರಿಯಬೇಕೇ? ಅಥವಾ ಹೆತ್ತವರು ನೋಡಿದ ಯುವತಿಯನ್ನು ಮದುವೆಯಾಗಬೇಕೇ? ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಎರಡು ಮನಸ್ಸಿನೊಂದಿಗೆ ಗೊಂದಲದಲ್ಲಿದ್ದೆ ಎಂಬುದನ್ನು ಗೆಹ್ಲೋಟ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ನಿಶ್ಚಿತಾರ್ಥದ ಬಳಿಕ ನಿಕ್ಕಿ ಯಾದವ್ ಮನೆಗೆ ಬಂದು ಉಳಿದುಕೊಂಡಿದ್ದ ಗೆಹ್ಲೋಟ್, ಅಂದು ರಾತ್ರಿಪೂರ್ತಿ ಅಲ್ಲಿಯೇ ಇದ್ದ. ಇತ್ತ ಗೆಹ್ಲೋಟ್ ಜೊತೆ ಗೋವಾ ಪ್ರವಾಸಕ್ಕೆ ಯಾದವ್ ಪ್ಲಾನ್ ಮಾಡಿದ್ದಳು. ಮೊದಲೇ ತನ್ನ ಟಿಕೆಟ್ ಬುಕ್ ಮಾಡಿದ್ದಳು. ಆದರೆ, ಟ್ರಾವೆಲ್ ಅಪ್ಲಿಕೇಶನ್ನಲ್ಲಿ ಗೆಹ್ಲೋಟ್ ಟಿಕೆಟ್ ಬುಕ್ ಆಗದಿದ್ದಾಗ ಇಬ್ಬರು ತಮ್ಮ ಪ್ಲಾನ್ ಬದಲಾಯಿಸಿ, ಹಿಮಾಚಲ ಪ್ರದೇಶಕ್ಕೆ ಪ್ರವಾಸ ಮಾಡಲು ನಿರ್ಧರಿಸಿದರು.
ಬಳಿಕ ಇಬ್ಬರು ತಮ್ಮ ಕಾರಿನಲ್ಲಿ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಹೋದರು, ಅಲ್ಲಿ ಅವರು ಆನಂದ್ ವಿಹಾರ್ ಬಸ್ ಟರ್ಮಿನಸ್ನಿಂದ ಬಸ್ ಹತ್ತಬೇಕು ಅಂತಾ ಅಂದುಕೊಂಡರು. ಆದರೆ ಅಲ್ಲಿಗೆ ತಲುಪಿದಾಗ, ಬಸ್ ಕಾಶ್ಮೀರ್ ಗೇಟ್ ಐಎಸ್‌ಬಿಟಿಯಿಂದ ಹೊರಡಲಿದೆ ಎಂದು ಅವರಿಗೆ ತಿಳಿಯಿತು. ಬಳಿಕ ಕಾಶ್ಮೀರ ಗೇಟ್ಗೆ ತೆರಳಿ, ಕಾರನ್ನು ಪಾರ್ಕ್ ಮಾಡಿ ಮಾತನಾಡಲು ಆರಂಭಿಸಿದರು. ಈ ವೇಳೆ ಗೆಹ್ಲೋಟ್, ನಿಗದಿಯಾದ ತನ್ನ ಮದುವೆ ಬಗ್ಗೆ ಹೇಳಿದ್ದಾನೆ.
ನಿಶ್ಚಿತಾರ್ಥದ ಹಾಗೂ ಬೇರೊಂದು ಯುವತಿಯನ್ನು ಮದುವೆ ಆಗುವ ಬಗ್ಗೆ ಯಾದವ್ ಅಸಮಾಧಾನ ಹೊರಹಾಕಿದಳು. ಅಲ್ಲದೆ, ತನ್ನೊಂದಿಗೆ ಹಿಮಾಚಲ ಪ್ರದೇಶ ಪ್ರವಾಸಕ್ಕೆ ಬರುವಂತೆ ಒತ್ತಾಯಿಸಿದಳು. ಆದರೆ, ನಾನು ಅಂದಿನಿಂದ ಎರಡು ಮನಸ್ಸಿನಲ್ಲಿದ್ದೆ. ತುಂಬಾ ಗೊಂದಲದಲ್ಲಿ ಸಿಲುಕಿ ಏನು ಮಾಡಬೇಕೆಂದು ಯೋಚಿಸುತ್ತಿದ್ದೆ. ಮದುವೆ ನಿಗದಿಯಾಗಿದ್ದರಿಂದ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ಮದುವೆ ವಿಚಾರಕ್ಕೆ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತು. ತುಂಬಾ ಕೋಪದಲ್ಲಿದ್ದ ನಾನು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದೆ. ಬಳಿಕ ಆಕೆಯ ಮೃತದೇಹವನ್ನು ಗ್ರಾಮದಲ್ಲಿರುವ ನಮ್ಮ ಡಾಭಾದಲ್ಲಿ ಇಟ್ಟೆ ಎಂದು ಗೆಹ್ಲೋಟ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಗೆಹ್ಲೋಟ್ ತನ್ನ ಲಿವ್ ಇನ್ ಸಂಗಾತಿಯನ್ನು ಕೊಲೆ ಮಾಡಲು ಮೊದಲೇ ಬಯಸಿದ್ದನು ಮತ್ತು ಪ್ರವಾಸಕ್ಕೆ ಹೋಗುವುದಾಗಿ ಭರವಸೆ ನೀಡುವ ಮೂಲಕ ಅವಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ತಾನು ಎರಡು ಮನಸ್ಸಿನಲ್ಲಿದ್ದೆ ಎಂದು ಗೆಹ್ಲೋಟ್ ಹೇಳಿದ್ದಾನೆ. ಆದರೆ, ಇದೆಲ್ಲ ಆತನ ಆವೃತ್ತಿಯಾಗಿದೆ. ನಿಶ್ಚಿತಾರ್ಥದ ದಿನ ತುಂಬಾ ಸಂತೋಷವಾಗಿ, ಎಂಜಾಯ್ ಮಾಡಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಕೊಲೆ ಮಾಡಿದ ನಿಖರವಾದ ಸಮಯವನ್ನು ಸಹ ಆತ ಹೇಳುತ್ತಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಫೆಬ್ರವರಿ 9 ಮತ್ತು 10ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕಾರಿನಲ್ಲಿ ಮೊಬೈಲ್ ಡೇಟಾ ಕೇಬಲ್ನಿಂದ ನಿಕ್ಕಿಯ ಕುತ್ತಿಗೆ ಬಿಗಿದು ಕೊಂದು, ಮೃತದೇಹವನ್ನು ದೆಹಲಿಯ ಮಿತ್ರಾನ್ ಹಳ್ಳಿಯಲ್ಲಿ ತನ್ನ ಕುಟುಂಬದವರು ನಡೆಸುತ್ತಿದ್ದ ಡಾಬಾದಲ್ಲಿದ್ದ ರೆಫ್ರಿಜರೇಟರ್ನಲ್ಲಿ ಇರಿಸಿದ್ದಾನೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ. 2018ರಲ್ಲಿ ಇಬ್ಬರು ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಸೆಂಟರ್ಗೆ ಹೋಗುತ್ತಿದ್ದಾಗ ಪರಿಚಿತರಾಗಿ ಹಲವು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. 2022ರ ಡಿಸೆಂಬರ್ನಲ್ಲಿ ಸಾಹಿಲ್ ಬೇರೊಂದು ಹುಡುಗಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. 2023 ಫೆಬ್ರವರಿ 9 ಮತ್ತು 10ಕ್ಕೆ ವಿವಾಹ ನಿಗದಿಪಡಿಸಲಾಗಿತ್ತು. ಈ ವಿಷಯ ನಿಕ್ಕಿಗೆ ತಿಳಿದ ಬಳಿಕ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಯಾದವ್ ಹೇಳಿದ್ದಾರೆ. ಬಂಧಿತ ಆರೋಪಿ ಸಾಹಿಲ್ನನ್ನು ಕೋರ್ಟ್ 5 ದಿನ ಪೊಲೀಸರ ವಶಕ್ಕೆ ನೀಡಿದೆ. (ಏಜೆನ್ಸೀಸ್)