ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ, ಹುಣಸೂರು ಜೆಡಿಎಸ್ ಕ್ಷೇತ್ರದ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ಹುಟ್ಟು ಹಬ್ಬದ ಹಿನ್ನೆಲೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಸಿದೆ. ಸಮಾವೇಶದಲ್ಲಿ ಜಿ.ಡಿ.ಹರೀಶ್‌ಗೌಡ ಮಾತನಾಡುತ್ತಾ, ನಿಖಿಲ್ ಕುಮಾರಸ್ವಾಮಿ ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಸಿಎಂ ಆಗುವ ಎಲ್ಲಾ ಲಕ್ಷಣಗಳು ಅವರಿಗಿದೆ ಎಂದು ಹೇಳಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ ಮಾತನಾಡುತ್ತಾ, ನಿಖಿಲ್ ಹಾಗೂ ಹರೀಶ್ ಗೌಡ ಲವ- ಕುಶ ಇದ್ದಂತೆ. ಹರೀಶ್ ಗೌಡ ಹುಣಸೂರಿನಲ್ಲಿ ಗೆದ್ದೇ ಗೆಲ್ಲುತ್ತಾರೆ. ನಿಖಿಲ್ ರಾಜ್ಯದಲ್ಲೇ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, ಜೆಡಿಎಸ್ನ ಮೈಸೂರು ಭಾಗಕ್ಕೆ ಜಿ.ಟಿ.ದೇವೇಗೌಡ ಅವರು ಒಂದು ಶಕ್ತಿ ಎಂದು ನನಗೆ ಕುಮಾರಣ್ಣ ಹೇಳಿ ಕಳುಹಿಸಿದ್ದಾರೆ. ಜಿಟಿಡಿ ಅವರಿಗೆ ಕಾಂಗ್ರೆಸ್ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಉತ್ತರ ನೀಡಿದ್ದೀರಿ. ಕಳೆದ ಐತಿಹಾಸಿಕ ಚುನಾವಣೆಯಲ್ಲಿ ಜಿಟಿಡಿ ಅವರನ್ನು ಗೆಲ್ಲಿಸಿ ಉತ್ತರ ನೀಡಿದ್ದೀರಿ ಎಂದು ಹೇಳಿದರು.
ಈ ಬಾರಿಯ ವಿಧನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 40 ರಿಂದ 50 ಸ್ಥಾನಕ್ಕೆ ಸೀಮಿತವಾಗುವುದಿಲ್ಲ. 123 ಸ್ಥಾನವನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆಯ ಮೂಲಕ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಕುಮಾರಸ್ವಾಮಿ ಅವರು ನೀಡಿರುವ ಜನಪರ ಯೋಜನೆಗಳು ಇಂದಿಗೂ ಮನೆ ಮಾತಾಗಿದೆ. ಕುಮಾರಸ್ವಾಮಿ ಅವರ ಏಕಾಂಗಿ ಹೋರಾಟಕ್ಕೆ ನೀವೆಲ್ಲರೂ ಸಾಥ್ ನೀಡಿ ಎಂದರು.
ನಿಖಿಲ್ ರಾಮನಗರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಜನರ ಕೂಗಾಗಿತ್ತು. ಜನರ ಆಶಯಕ್ಕೆ ಸ್ಪಂದಿಸಿ ರಾಮನಗರದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.