ನ್ಯೂಸ್

ಬೊಂಬೆಯಾಟಕ್ಕೆ ನಿಖಿಲ್ ಎಂಟ್ರಿ; ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ

ಬೆಂಗಳೂರು: ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ತೆರೆಬಿದ್ದ ಬೆನ್ನಲ್ಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಅಣಿಯಾಗಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ, ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೆ, ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಪಠಾಣ್​ಗೆ ಅವಕಾಶ ನೀಡಿದೆ. ನಾಮಪತ್ರ ಸಲ್ಲಿಕೆಗೆ ಅ.25 ಕೊನೇ ದಿನವಾಗಿದೆ.

ಸಿಎಂ ಪವರ್ ಶೋ: ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೂಡಿ ರೋಡ್ ಶೋ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರೆ, ಸಂಡೂರಿನಲ್ಲಿ ಸಂಸದ, ತಮ್ಮ ಪತಿ ತುಕಾರಾಂ ಜತೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು, ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರೊಡಗೂಡಿ ತಮ್ಮ ಪುತ್ರನ ನಾಮಪತ್ರ ಸಲ್ಲಿಕೆಗೆ ಮುನ್ನ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಮನ್ವಯ ಸಭೆ ನಡೆಸಲಾಯಿತು. ಸಭೆಯ ಬಳಿಕ ನಿಖಿಲ್ ಕುಮಾರಸ್ವಾಮಿ ಎನ್​ಡಿಎ ಅಭ್ಯರ್ಥಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು.

ಆಯ್ಕೆ ಹಿಂದಿನ ಲೆಕ್ಕಾಚಾರ: ಯೋಗೇಶ್ವರ್ ತಮ್ಮದೇ ಮತ ಬ್ಯಾಂಕ್ ಹೊಂದಿದ್ದು, ಕಾಂಗ್ರೆಸ್ ಸಾಂಪ್ರದಾಯಿಕ ಮತ ಸೇರಿಕೊಂಡರೆ ಚನ್ನಪಟ್ಟಣದಲ್ಲಿ ಗೆಲುವು ಕಷ್ಟವಾಗಲಿಕ್ಕಿಲ್ಲ ಎಂಬುದು ಕೈಪಾಳಯದ ಅಂದಾಜು. ಸಂಡೂರಿನಲ್ಲಿ ತುಕಾರಂ ಪ್ರಭಾವ ಗಟ್ಟಿಯಾಗಿರುವುದರಿಂದ ಅವರ ಪತ್ನಿಗೆ ಅವಕಾಶ ನೀಡುವ ಮೂಲಕ ಹೆಚ್ಚಿನ ಪ್ರಯೋಗಕ್ಕೆ ಆಸಕ್ತಿ ತೋರಿಸಿಲ್ಲ. ಸಂಸದ ಬಸವರಾಜ ಬೊಮ್ಮಾಯಿ ನಿರಂತರವಾಗಿ ಗೆದ್ದು ಬರುತ್ತಿರುವ ಶಿಗ್ಗಾಂವಿ ಉಳಿಸಿಕೊಳ್ಳಲು ಅವರ ಪುತ್ರನಿಗೆ ಅವಕಾಶ ಕೊಟ್ಟರೆ ಮಾತ್ರ ಸಲೀಸು ಎಂದು ಬಿಜೆಪಿ ಲೆಕ್ಕಹಾಕಿದಂತಿದೆ. ಸಂಡೂರಿನಲ್ಲಿ ಕಾಂಗ್ರೆಸ್ ತುಕಾರಾಂ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಬಂಗಾರು ಹನುಮಂತು ಹೊಸ ಪ್ರಯೋಗ ಎಂಬಂತೆ ಬಳಸಿಕೊಂಡಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್​ಗೆ ಪೈಪೋಟಿ ನೀಡ ಬೇಕೆಂದರೆ ನಿಖಿಲ್ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ಕಣಕ್ಕಿಳಿಸಲಾಗಿದೆ.

ಎದುರಾಳಿಗಳ ಬಲಾಬಲ

ಕಾಂಗ್ರೆಸ್

  1. ಗ್ಯಾರಂಟಿಗಳ ವರ್ಚಸ್ಸಿನ ಜತೆ ಇನ್ನೂ ಮೂರೂವರೆ ವರ್ಷ ಅಧಿಕಾರವಿದೆ. ಆದರೆ, ವಾಲ್ಮೀಕಿ ನಿಗಮ, ಮುಡಾ ಪ್ರಕರಣ ಪ್ರತಿಪಕ್ಷಗಳ ಪಾಲಿನ ಪ್ರಮುಖ ಅಸ್ತ್ರ
  2. ಅಹಿಂದ ಮತ ಬ್ಯಾಂಕ್ ನಂಬಿಕೊಂಡಿದೆ. ಆದರೆ ಜಾತಿ ಗಣತಿ, ಒಳ ಮೀಸಲು ಜಾರಿಗೆ ಕೋರ್ಟ್ ಆದೇಶ ನೀಡಿರುವುದು ಸದ್ಯದ ಚರ್ಚಾ ವಿಷಯ
  3. ಗಟ್ಟಿಯಾದ ನಾಯಕತ್ವವಿದೆ. ಆದರೆ, ತೇಪೆ ಹಚ್ಚಿರುವ ಹೊರತಾಗಿಯೂ ನಾಯಕತ್ವ ಗೊಂದಲ ಬೂದಿ ಮುಚ್ಚಿದ ಕೆಂಡಂದಂತಿದೆ

ಬಿಜೆಪಿ- ಜೆಡಿಎಸ್

  1. ದೆಹಲಿ ಮಟ್ಟದಲ್ಲಿ ಮೈತ್ರಿ ಗಟ್ಟಿಯಾಗಿದೆ. ಆದರೆ, ರಾಜ್ಯ ಮಟ್ಟದಲ್ಲಿ ನೆಂಟಸ್ತಿಕೆಯಲ್ಲಿ ಅಪನಂಬಿಕೆ ಹೆಚ್ಚಾಗಿದೆ.
  2. ವಿವಿಧ ಪ್ರಕರಣದಲ್ಲಿ ಸರ್ಕಾರ ಎಡವಿರುವುದು ಪ್ರತಿಪಕ್ಷಕ್ಕೆ ಸಹಜ ಬಲ. ಆದರೆ, ವಿಷಯ ತಾತ್ವಿಕ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ
  3. ಮೈತ್ರಿಯಿಂದ ಫಲ ಖಚಿತ ಎಂಬ ಜಾಗೃತಿ ಇದೆ. ಆದರೆ, ಎಲ್ಲರನ್ನೂ ಒಟ್ಟಿಗೆ ಕೊಂಡುಹೋಗುವಲ್ಲಿ ಪದೇಪದೆ ಅಡೆತಡೆ.

ಇನ್ನೇನಿದ್ದರೂ ಪ್ರಚಾರ ಭರಾಟೆ: ಇನ್ನು ಮುಂದಿನ 15-16 ದಿನ ಪ್ರಚಾರದ ಭರಾಟೆ ಜೋರಾಗಿರಲಿದೆ. ಕಾಂಗ್ರೆಸ್, ಬಿಜೆಪಿ ಚುನಾವಣೆ ಹೊಣೆಯನ್ನು ನಾಯಕರಿಗೆ ಹಂಚಿಕೆ ಮಾಡಿದೆ. ಹಾಗೆಯೇ ಪ್ರಚಾರ ಸಭೆಗಳ ಆಯೋಚನೆ ಬಗ್ಗೆ ರೂಪುರೇಷೆ ಸಿದ್ಧವಾಗಿದೆ. ಪದಾಧಿಕಾರಿಗಳನ್ನು ಪ್ರಚಾರ, ಮೇಲ್ವಿಚಾರಣೆಗೆ ಬಳಸಿಕೊಳ್ಳಲಾಗುತ್ತಿದೆ. ಚನ್ನಪಟ್ಟಣ

ನಿಖಿಲ್ ಕುಮಾರ್​ಸ್ವಾಮಿ (ಜೆಡಿಎಸ್) ಸಿ.ಪಿ.ಯೋಗೇಶ್ವರ್ (ಕಾಂಗ್ರೆಸ್) ಸಂಡೂರು ಅನ್ನಪೂರ್ಣ (ಕಾಂಗ್ರೆಸ್) ಬಂಗಾರು ಹನುಮಂತು (ಬಿಜೆಪಿ) ಶಿಗ್ಗಾಂವಿ ಭರತ್ ಬೊಮ್ಮಾಯಿ (ಬಿಜೆಪಿ) ಯಾಸೀರ್ ಮೊಹ್ಮದ್ ಪಠಾಣ್ (ಕಾಂಗ್ರೆಸ್)

ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಅಥವಾ ಜೆಡಿಎಸ್​ನವರು ಯಾರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತಾರೆಂಬುದು ನಮಗೆ ಮುಖ್ಯವಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಗೆಲುವು ಸಾಧಿಸಲಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ

ನಾನು ಚನ್ನಪಟ್ಟಣದಲ್ಲೇ ಇದ್ದು ಪ್ರಚಾರ ಮಾಡುತ್ತೇನೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ