Nidhhi Agerwal: ತೆಲುಗು ಚಿತ್ರರಂಗದ ಪವರ್ಸ್ಟಾರ್, ನಟ ಪವನ್ ಕಲ್ಯಾಣ್ ಅಭಿನಯದ 'ಹರಿ ಹರ ವೀರಮಲ್ಲು' ಚಿತ್ರ ಇದೇ ಜುಲೈ 24ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಪ್ರಸ್ತುತ, ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಖತ್ ಬಿಜಿಯಾಗಿರುವ ನಟಿ ನಿಧಿ ಅಗರ್ವಾಲ್, ಚಿತ್ರಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಮೆಗಾ ಸೂರ್ಯ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಎ. ದಯಾಕರ್ ರಾವ್ ನಿರ್ಮಿಸಿರುವ ಈ ಚಿತ್ರವನ್ನು ಕ್ರಿಶ್ ಜಾಗರ್ಲಮುಡಿ ನಿರ್ದೇರ್ಶಿಸಿದ್ದಾರೆ. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ಗೆ ನಾಯಕಿಯಾಗಿ ನಟಿ ನಿಧಿ ಅಗರ್ವಾಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ, ಪವನ್ ರಾಜಕೀಯದಲ್ಲಿ ಸಕ್ರಿಯರಾಗಿರುವುದರಿಂದ ನಟಿಯೇ ಹೆಚ್ಚಾಗಿ ಪ್ರಚಾರದಲ್ಲಿ ಸದ್ದು ಮಾಡುತ್ತಿದ್ದಾರೆ. ವಿಶೇಷವಾಗಿ ತಮ್ಮ ಹೇಳಿಕೆಗಳಿಂದ.
ತನ್ನ ಪಾತ್ರದ ಕುರಿತು ಮಾತನಾಡಿದ ನಿಧಿ, "ಇದೊಂದು ದೊಡ್ಡ ಸಿನಿಮಾ. ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಭಾರೀ ಖುಷಿ ತಂದಿದೆ. ಪಂಚಮಿ ಎಂಬ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರದಲ್ಲಿ ಹಲವು ಕೋನಗಳಿವೆ. ಪವನ್ ಕಲ್ಯಾಣ್ ಮತ್ತು ನನ್ನ ನಡುವಿನ ದೃಶ್ಯಗಳು ತುಂಬ ಚೆನ್ನಾಗಿ ಮೂಡಿಬಂದಿವೆ. ಹಾಡುಗಳಲ್ಲಿಯೂ ವೈವಿಧ್ಯತೆ ಇದೆ. ಈ ಸಿನಿಮಾದಲ್ಲಿ ನಾನು ಬಹುತೇಕ ಆಭರಣಗಳನ್ನು ಬಳಸಿದ್ದೇನೆ. ಅವುಗಳ ಮೌಲ್ಯ ಸುಮಾರು 2 ಕೋಟಿ ರೂ. ಇದೆ" ಎಂದರು.
"ಪಂಚಮಿ ಪಾತ್ರಕ್ಕೆ ಸಿದ್ಧವಾಗಲು ನನಗೆ ಎರಡು ಗಂಟೆಗಳೇ ಬೇಕಾಯಿತು. ಕ್ರಿಶ್ ನನ್ನ ಪಾತ್ರದ ಮತ್ತು ಕಥೆಯ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದ ಬಳಿಕವೇ ಈ ಚಿತ್ರದಲ್ಲಿ ಅಭಿನಯಿಸಲು ನಾನು ಒಪ್ಪಿಕೊಂಡೆ. ಪವನ್ ಕಲ್ಯಾಣ್ ಅವರ ಬಗ್ಗೆ ಹೇಳುವುದಾದರೆ, ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಪವನ್ ಅವರಿಗೆ ಸಾಕಷ್ಟು ಸ್ಟಾರ್‌ಡಮ್ ಮತ್ತು ಫ್ಯಾನ್ಸ್ಗಳಿದ್ದಾರೆ. ನಾನು ನೂರು ಚಿತ್ರಗಳನ್ನು ಮಾಡುವುದೂ ಒಂದೇ. ಸರ್ ಜೊತೆಗೆ ಕೇವಲ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಒಂದೇ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರೊಬ್ಬ ಮಹಾನ್ ನಟ" ಎಂದು ನಿಧಿ ಹೇಳಿದ್ದಾರೆ,(ಏಜೆನ್ಸೀಸ್).