ನ್ಯೂಸ್

ಭಯೋತ್ಪಾದಕ ಕೃತ್ಯಕ್ಕೆ ಹವಾಲಾ ಹಣ ಬಳಕೆ ಆರೋಪ: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ದಾಳಿ

ಮಂಗಳೂರು: ಸ್ಥಳೀಯ ಪೊಲೀಸ್​ ಅಧಿಕಾರಿಗಳ ನೆರವು ಪಡೆದು ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದಾಳಿ ಮಾಡಿದೆ.

ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ತಾಲೂಕಿನ 16 ಕಡೆಗಳಲ್ಲಿ ಎನ್​ಐಎ ಕಾರ್ಯಾಚರಣೆ ನಡೆಸುತ್ತಿದೆ. ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ.

2022ರ ಜುಲೈ ತಿಂಗಳಲ್ಲಿ ಬಿಹಾರ ರಾಜಧಾನಿ ಪಟನಾದ ಫುಲ್ವಾರಿ ಶರೀಫ್​ ಏರಿಯಾದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು. ಬಳಿಕ ತನಿಖೆಯ ಜಾಡು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಗೆ ಎನ್​ಐಎ ತಂಡ ಬಂದಿತ್ತು.

ಕೋಟ್ಯಂತರ ರೂಪಾಯಿ ವಹಿವಾಟು

ಇತ್ತೀಚೆಗೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿಯೂ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಲದ ಸರ್ಫರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಹಾಗೂ ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬುವರನ್ನು ಬಂಧಿಸಲಾಗಿತ್ತು. ದಾಳಿ ವೇಳೆ ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂ. ವಹಿವಾಟು ನಡೆಸಿದ್ದು ಪತ್ತೆಯಾಗಿತ್ತು.

ಹವಾಲಾ ಜಾಲ ಪತ್ತೆ

ಕೋಟ್ಯಂತರ ಹಣದ ವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪಿಎಫ್ಐ ಹವಾಲಾ ಹಣದ ಜಾಲವನ್ನು ಎನ್​ಐಎ ಬೆನ್ನತ್ತಿದೆ. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ಜಾಲ ಪತ್ತೆಯಾಗಿದ್ದು, ತನಿಖೆ ಚುರುಕುಗೊಂಡಿದೆ. ಅದರ ಭಾಗವಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ದಾಳಿಯಾಗಿದೆ. (ದಿಗ್ವಿಜಯ ನ್ಯೂಸ್​)