ನವದೆಹಲಿ: ಮಾವೋವಾದಿ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ತೆಲಂಗಾಣ ಪ್ರಜಾ ಫ್ರಂಟ್ನ ಉಪಾಧ್ಯಕ್ಷ ನಲಮಾಸ ಕೃಷ್ಣ(41) ಎಂಬಾತನನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಭಾನುವಾರ ಬಂಧಿಸಿದೆ. ತಥಾಕಥಿತ ಜನಪರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದ ಮತ್ತು ಅಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಕೃಷ್ಣ, ನಕ್ಸಲ್ ಚಟುವಟಿಕೆಗೆ ಪೂರಕವಾದ ನೆರವು ನೀಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆ ಹಾಕಿದ್ದ ಎನ್ಐಎ ತಂಡ, ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿ ಆತನನ್ನು ಬಂಧಿಸಿತ್ತು.
ಹೈದರಾಬಾದ್ ನಿವಾಸಿ ಕೃಷ್ಣ, ತೆಲಂಗಾಣ ಪ್ರಜಾ ಫ್ರಂಟ್ನ ಉಪಾಧ್ಯಕ್ಷನಾಗಿದ್ದುಕೊಂಡು ಸಿಪಿಐ ಮಾವೋವಾದಿ ಚಟುವಟಿಕೆಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಕಳೆದ ವರ್ಷ ಅಕ್ಟೋಬರ್ 8ರಂದೇ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ತೆಲಂಗಾಣ ವಿದ್ಯಾರ್ಥಿ ವೇದಿಕಾ(ಟಿವಿವಿ) ಸಂಘಟನೆಯ ಅಧ್ಯಕ್ಷ ಮಡ್ಡಿಲೇಟಿ ಅಲಿಯಾಸ್ ಬಂಢಾರಿ ಮಡ್ಡಿಲೇಟಿ ನಿವಾಸದಿಂದ ಸಿಕ್ಕ ದಾಖಲೆಗಳ ಪ್ರಕಾರ ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಇದರ ವಿಚಾರಣೆಯನ್ನು ಎನ್ಐಎ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.
ಎನ್ಐಎ ಮಾಹಿತಿ ಪ್ರಕಾರ, ಕೃಷ್ಣ ನಿಯತವಾಗಿ ಛತ್ತೀಸ್ಗಢಕ್ಕೆ ಭೇಟಿ ನೀಡಿದ್ದು ಸಿಪಿಐ ಮಾವೋವಾದಿ ನಾಯಕರ ಜತೆಗೆ ಸಂಪರ್ಕದಲ್ಲಿದ್ದ. ಅವರ ನಿರ್ದೇಶನಗಳನ್ನು ಮಡ್ಡಿಲೇಟಿಗೆ ನೀಡುತ್ತಿದ್ದ. ಟಿಪಿಎಫ್, ಟಿವಿವಿ ಮತ್ತು ಇತರೆ ಕೆಲವು ಸಂಘಟನೆಗಳ ನಾಯಕರಿಗೆ ಮಾವೋವಾದಿ ನಾಯಕರ ಸಂದೇಶ ತಲುಪಿಸುವ ಕೆಲಸವನ್ನು ಕೃಷ್ಣ ಮಾಡುತ್ತಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇವರು ದುರುಪಯೋಗ ಮಾಡುತ್ತಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದ್ದು, ಈ ಕುರಿತ ವಿಚಾರಣೆ, ತನಿಖೆ ಪ್ರಗತಿಯಲ್ಲಿದೆ. (ಏಜೆನ್ಸೀಸ್)