ನ್ಯೂಸ್

ಮುಂದಿನ ಉಪರಾಷ್ಟ್ರಪತಿ ಯಾರಾಗಲಿದ್ದಾರೆ? ಊಹಾಪೋಹಗಳ ನಡುವೆ ಮಹತ್ವದ ಮಾಹಿತಿ ಬಹಿರಂಗ! Vice President

Vice President : ಮುಂಗಾರು ಅಧಿವೇಶನದ ಮೊದಲ ದಿನದಂದೇ ಜಗದೀಪ್ ಧನಕರ್ ಅವರು ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ ಬಳಿಕ ಅವರ ಉತ್ತರಾಧಿಕಾರಿ ಯಾರು ಎಂಬ ಊಹಾಪೋಹಗಳು ಇದೀಗ ಶುರುವಾಗಿವೆ. ಇದರ ನಡುವೆ ಮುಂದಿನ ಉಪರಾಷ್ಟ್ರಪತಿ ಜೆಡಿಯು ನಾಯಕ ಮತ್ತು ಕೇಂದ್ರ ಸಚಿವ ರಾಮನಾಥ್ ಠಾಕೂರ್ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಅವರಲ್ಲ, ಬಿಜೆಪಿಯವರೇ ಆಗಿರುತ್ತಾರೆಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಬಿಜೆಪಿ ಪಕ್ಷದ ಮೂಲ ಸಿದ್ಧಾಂತದೊಂದಿಗೆ ಬಲವಾಗಿ ಹೊಂದಿಕೆಯಾಗುವ ವ್ಯಕ್ತಿಯನ್ನು ಮುಂದಿನ ಉಪರಾಷ್ಟ್ರಪತಿಯನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ. ರಾಮನಾಥ್ ಠಾಕೂರ್ ಅವರನ್ನು ಈ ಪಾತ್ರಕ್ಕೆ ಪರಿಗಣಿಸಲಾಗಿದೆ ಎಂಬ ಊಹಾಪೋಹಗಳು ಆಧಾರರಹಿತವಾಗಿವೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಇತ್ತೀಚೆಗೆ ಠಾಕೂರ್ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಊಹಾಪೋಹ ಭುಗಿಲೆದ್ದಿತು. ಆದರೆ, ಈ ಭೇಟಿ ಕೇವಲ ನಿಯಮಿತ ಭೇಟಿ ಎಂದು ಹೇಳಲಾಗಿದೆ. ಅದೇ ವೇಳೆ ಅನೇಕ ಇತರೆ ಸಂಸದರು ಕೂಡ ನಡ್ಡಾ ಅವರನ್ನು ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಇನ್ನು ಠಾಕೂರ್ ಅವರ ಉಮೇದುವಾರಿಕೆಗೆ ಸಂಬಂಧಿಸಿದಂತೆ ಜೆಡಿ (ಯು) ನಾಯಕತ್ವ ಮತ್ತು ಬಿಜೆಪಿ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ, ಬಿಜೆಪಿಯು ಬಿಹಾರದ ನಾಯಕನನ್ನು ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಬಹುದು ಎಂಬ ವದಂತಿಯ ನಡುವೆ ಠಾಕೂರ್ ಅವರ ಹೆಸರು ಕೇಳಿಬಂದಿದೆ. ಧನಕರ್​ ಅವರ ರಾಜೀನಾಮೆಯು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಬಡ್ತಿ ನೀಡಲು ದಾರಿ ಮಾಡಿಕೊಡುತ್ತದೆ ಎಂಬ ಒಂದು ಸಿದ್ಧಾಂತವು ಕೂಡ ಹರಿದಾಡುತ್ತಿದೆ. ಚುನಾವಣೆಗೂ ಮುನ್ನ ನಿತೀಶ್​ ಅವರನ್ನು ಉತ್ತಮ ಮನಸ್ಥಿತಿಯಲ್ಲಿಡುವ ಗುರಿಯಿಂದ ಈ ಹುದ್ದೆಗೆ ಅವರನ್ನು ನೇಮಿಸಬಹುದು ಎಂಬ ಚರ್ಚೆ ಶುರುವಾಗಿದೆ.

ಇದರ ನಡುವೆ ಮಂಗಳವಾರ (ಜುಲೈ 22) ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಮಾತನಾಡಿ, ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಿದರೆ ಬಿಹಾರಕ್ಕೆ ತುಂಬಾ ಒಳ್ಳೆಯದು ಎನ್ನುವ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದರು.

ಅಂದಹಾಗೆ, ಮುಂಬರುವ ಬಿಹಾರ ಚುನಾವಣೆಗಳ ಮೇಲೆ ಬಿಜೆಪಿಗೆ ಹೆಚ್ಚಿನ ಆಸಕ್ತಿ ಇದೆ. ಅಲ್ಲಿ ಪಕ್ಷವು ಎಂದಿಗೂ ಸ್ವಂತವಾಗಿ ಅಧಿಕಾರವನ್ನು ಹೊಂದಿಲ್ಲ. ಹೀಗಾಗಿ ನಿತೀಶ್ ಅವರನ್ನು ಕೇಂದ್ರಕ್ಕೆ ತರುವುದರಿಂದ ರಾಜ್ಯದಲ್ಲಿ ರಾಜಕೀಯ ಜಾಗವನ್ನು ತೆರೆಯಬಹುದು ಮತ್ತು NDA ಏಕತೆಯ ಸಂಕೇತವಾಗಬಹುದು ಅನ್ನೋ ಆಲೋಚನೆಯಲ್ಲಿ ಬಿಜೆಪಿ ಇದೆ.

ಇನ್ನು ರಾಜೀನಾಮೆ ನೀಡಿದ ಬಳಿಕ ಧನಕರ್ ಅವರು ರಾಜ್ಯಸಭೆಯ ಕಲಾಪಗಳ ಅಧ್ಯಕ್ಷತೆ ವಹಿಸಲಿಲ್ಲ. ಅವರ ಅನುಪಸ್ಥಿತಿಯಲ್ಲಿ, ಜೆಡಿ(ಯು) ನ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಸದನದ ಅಧ್ಯಕ್ಷತೆ ವಹಿಸಿದರು. 2020ರಿಂದ ಈ ಹುದ್ದೆಯಲ್ಲಿರುವ ಹರಿವಂಶ್, ಉಳಿದ ಅಧಿವೇಶನಕ್ಕೆ ಸದನದ ಅಧ್ಯಕ್ಷತೆ ವಹಿಸುವ ನಿರೀಕ್ಷೆಯಿದೆ. ಬಿಹಾರ ನಾಯಕರೊಬ್ಬರು ಮೇಲ್ಮನೆಯಲ್ಲಿ ಕಲಾಪಗಳನ್ನು ನಡೆಸುತ್ತಾರೆ ಎಂಬ ಮುನ್ಸೂಚನೆಯು ಕೂಡ ಚುನಾವಣೆಯಲ್ಲಿ NDA ಪರವಾಗಿ ಕೆಲಸ ಮಾಡಬಹುದು. (ಏಜೆನ್ಸೀಸ್​)