ನ್ಯೂಸ್

ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡನ ಆಕ್ರಂದನ

ಪಲಕ್ಕಾಡ್​: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್​​ನಲ್ಲಿ ನಡೆದಿದೆ.

ನಿನ್ನೆ (ಜು.10) ಬೆಳಗ್ಗೆ​ ಪಲಕ್ಕಾಡ್​ನ ಪುದುಸ್ಸೆರಿಯ ಕುರುಡಿಕಾಡ್​ ಎಂಬ ಪ್ರದೇಶದಲ್ಲಿ ಲಾರಿ ಮತ್ತು ಬೈಕ್​ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಅನಿಶಾ(20) ಮೃತ ದುರ್ದೈವಿ. ಈಕೆ ಪುಥುಕೋಡ್​ನ ಕಣ್ಣನ್ನೂರ್​ ಮೂಲದವಳು. ಕೊಯಮತ್ತೂರು ಮೂಲದ ಆಕೆಯ ಪತಿ ಶಕೀರ್​ (32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನಿಶಾ ಮತ್ತು ಶಕೀರ್​ ಕಳೆದ ಜೂನ್​ 4ರಂದು ಮದುವೆಯಾದರು. ಕೇವಲ ಒಂದು ತಿಂಗಳಲ್ಲಿ ಅನಿಶಾ ದಾರುಣ ಸಾವಿಗೀಡಾಗಿದ್ದಾಳೆ. ನೆಮ್ಮಾರ ಕುನಿಸ್ಸೆರಿಯ ಸಂಬಂಧಿಕರ ಮನೆಯಲ್ಲಿ ಹಬ್ಬ ಮುಗಿಸಿಕೊಂಡು ಅನಿಶಾ, ಕೊಯಮತ್ತೂರಿನ ಗಂಡನ ಮನೆಗೆ ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅನಿಶಾ ಮತ್ತು ಶಕೀರ್​ ಇದ್ದ ಬೈಕ್​ ಪಲಕ್ಕಾಡ್​ನಿಂದ ಕೊಯಮತ್ತೂರಿಗೆ ತೆರಳಿತ್ತು. ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್, ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅನಿಶಾ ಸ್ಥಳದಲ್ಲೇ ಮೃತಪಟ್ಟಳು. ಬೈಕ್​ ಓಡಿಸುತ್ತಿದ್ದ ಶಕೀರ್​ಗೆ ಗಂಭೀರ ಗಾಯವಾಗಿದೆ. ಕಂಟೈನರ್​ ಓವರ್​ಟೇಕ್​ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನು ಕಳೆದುಕೊಂಡ ಶಕೀರ್​ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)