More

    ಐಐಟಿಗಳ ಪ್ರವೇಶಕ್ಕೆ ಒಂದೇ ಪರೀಕ್ಷೆ: ಜೆಇಇ ಅಡ್ವಾನ್ಸ್ಡ್​ ಕೊಕ್? ಐಐಟಿ ನಿರ್ವಹಣಾ ಮಂಡಳಿ ಸಭೆಯಲ್ಲಿ ಚರ್ಚೆ

    | ರಮೇಶ್ ಮೈಸೂರು ಬೆಂಗಳೂರು

    ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಾದ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹಾಗೂ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್​ಐಟಿ), ಐಐಐಟಿಗಳ ಬಿ.ಟೆಕ್ ಪದವಿ ಪ್ರವೇಶಕ್ಕೆ ಒಂದೇ ಹಂತದ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ.

    ಕಳೆದ ಏಪ್ರಿಲ್​ನಲ್ಲಿ ಭುವನೇಶ್ವರದ ಐಐಟಿಯಲ್ಲಿ ನಡೆದ ಐಐಟಿಗಳ ನಿರ್ವಹಣಾ ಮಂಡಳಿ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ. ಜತೆಗೆ, ಮುಂದಿನ 3-4 ತಿಂಗಳಲ್ಲಿ ಈ ಬಗ್ಗೆ ಇನ್ನಷ್ಟು ವಿಸõತ ಸಂವಾದಗಳನ್ನು ನಡೆಸಿ ಎಲ್ಲ ಆಯಾಮಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಅನುಷ್ಠಾನ ಹಾಗೂ ದೇಶಾದ್ಯಂತ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಮಂಡಳಿಯ ಸಭೆಯಲ್ಲಾಗಿದೆ.

    ಕೇಂದ್ರೀಯ ಅನುದಾನದ ಐಐಟಿ ಹಾಗೂ ಎನ್​ಐಟಿ ಸೇರಿ ಎಲ್ಲ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕೆಂದು ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಲಹಾ ವೇದಿಕೆಯ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಇತ್ತೀಚೆಗೆ ವಿಷಯ ಮಂಡಿಸಿದ್ದರು. ಹಲವು ಪ್ರವೇಶ ಪರೀಕ್ಷೆಗಳನ್ನು ಎದುರಿಸುವುದು ವಿದ್ಯಾರ್ಥಿಗಳಿಗೂ ಕಷ್ಟದಾಯಕ. ಜತೆಗೆ, ಅವರ ಬುದ್ಧಿಮತ್ತೆಯನ್ನು ಅಳೆಯಲು ಒಂದೇ ಪರೀಕ್ಷೆ ಸಾಕಾಗುತ್ತದೆ ಎನ್ನುವುದು ಎಐಸಿಟಿಇ ಮಾಜಿ ಮುಖ್ಯಸ್ಥರೂ ಆಗಿರುವ ಅನಿಲ್ ಅಭಿಪ್ರಾಯ. ಉದ್ದೇಶಿತ ಒಂದೇ ಸಾಮಾನ್ಯ ಪರೀಕ್ಷೆಯನ್ನು ವರ್ಷದಲ್ಲಿ ಹಲವು ಬಾರಿ ನಡೆಸಲು ಚಿಂತಿಸಲಾಗಿದೆ.

    ಐಐಟಿಗಳ ಪ್ರವೇಶಕ್ಕೆ ಒಂದೇ ಪರೀಕ್ಷೆ: ಜೆಇಇ ಅಡ್ವಾನ್ಸ್ಡ್​ ಕೊಕ್? ಐಐಟಿ ನಿರ್ವಹಣಾ ಮಂಡಳಿ ಸಭೆಯಲ್ಲಿ ಚರ್ಚೆಈಗಿನ ವ್ಯವಸ್ಥೆ ಹೇಗಿದೆ?: ವರ್ಷಕ್ಕೆ ಎರಡು ಬಾರಿ ನಡೆಸಲಾಗುವ ಜೆಇಇ ಮೇನ್ ಪರೀಕ್ಷೆ ಮೂಲಕ ಎನ್​ಐಟಿ ಹಾಗೂ ಐಐಐಟಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಜತೆಗೆ, ಸ್ವಾಯತ್ತ ವಿವಿಗಳು ಹಾಗೂ ಖಾಸಗಿ ವಲಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿದರೂ ಜೆಇಇ ಮೇನ್ ಅಂಕಗಳನ್ನು ಪರಿಗಣಿಸುತ್ತವೆ. ಆದರೆ, ಐಐಟಿಗಳ ಪ್ರವೇಶಕ್ಕೆ ಜೆಇಇ ಮೇನ್ ಅರ್ಹತಾದಾಯಕ. ಇದರಲ್ಲಿ ಅಗ್ರಸ್ಥಾನ ಪಡೆದ ಅಂದಾಜು ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗಾಗಿ ಜೆಇಇ ಅಡ್ವಾನ್ಸ್್ಡ ಹೆಸರಲ್ಲಿ ಮತ್ತೊಂದು ಪರೀಕ್ಷೆ ನಡೆಸಿ ಪ್ರವೇಶ ನೀಡಲಾಗುತ್ತದೆ.

    ಪ್ರತಿ ಸಂಸ್ಥೆಯ ಮಾನದಂಡ ವಿಭಿನ್ನ: ಐಐಟಿ ಸೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶ ಮಾನದಂಡ ಭಿನ್ನವಾಗಿರುತ್ತದೆ. ಹೀಗಾಗಿ ಈ ಏಕರೂಪ ಪರೀಕ್ಷೆಗೆ ಐಐಟಿಗಳಿಂದ ಸಹಮತ ವ್ಯಕ್ತವಾಗುವುದು ಕಷ್ಟಸಾಧ್ಯ. ಈ ಹಿಂದೆ ಕೆಲ ರಾಜ್ಯಗಳು ಜೆಇಇ ಮೇನ್ ಆಧರಿಸಿ ಇಂಜಿನಿಯರಿಂಗ್ ಕೋರ್ಸ್​ಗೆ ಪ್ರವೇಶ ನೀಡುತ್ತಿದ್ದವು. ಆದರೆ, ಸಿಇಟಿ ಪ್ರಶ್ನೆಪತ್ರಿಕೆಗಳ ಮಟ್ಟವನ್ನು ಐಐಟಿ ಪ್ರವೇಶಕ್ಕೆ ನಿರೀಕ್ಷಿಸಲು ಸಾಧ್ಯವಿಲ್ಲ. ಅಂತೆಯೇ, ಸ್ಥಳೀಯ ಇಂಜಿನಿಯರಿಂಗ್ ಕಾಲೇಜುಗಳಿಗೆ ನಡೆಸುವ ಪರೀಕ್ಷೆಯನ್ನು ಐಐಟಿ ಮಟ್ಟಕ್ಕೆ ಏರಿಸುವುದು ಸರಿಯಲ್ಲ ಎಂಬ ಅಭಿಪ್ರಾಯವಿದೆ.

    ಈ ಹಿಂದೆಯೂ ಕೂಗಿತ್ತು: ಕಪಿಲ್ ಸಿಬಲ್ ಕೇಂದ್ರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಕೇಂದ್ರದ ಎಲ್ಲ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಜೆಇಇ ಮೇನ್ ಸಾಕು ಎಂಬ ವಾದವನ್ನು ಪ್ರತಿಪಾದಿಸಿದ್ದರು. ಆದರೆ, ಈ ವಾದವನ್ನು ಐಐಟಿಗಳು ಒಪ್ಪಿಕೊಂಡಿರಲಿಲ್ಲ. ಒಂದೇ ಪರೀಕ್ಷೆ ಸಾಕೆಂಬ ವಿಷಯವನ್ನು ಪ್ರತಿ ಐಐಟಿ ಜತೆಗೆ ಪ್ರತ್ಯೇಕವಾಗಿ ರ್ಚಚಿಸಲಾಗುತ್ತಿದೆ.

    ಐಐಟಿ ಸೇರಿ ಪ್ರತಿಷ್ಠಿತ ತಾಂತ್ರಿಕ ಕಾಲೇಜುಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಿಗೆ ಅನುಕೂಲಕರ. ಒಂದೇ ವಿಷಯದ ಪತ್ರಿಕೆಗಳನ್ನು ಹಲವು ಬಾರಿ ಬರೆಯಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಆದರೆ, ಪ್ರತಿ ಸಂಸ್ಥೆಯ ಪ್ರವೇಶ ಮಾನದಂಡ ಪ್ರತ್ಯೇಕವಾಗಿರುವುದರಿಂದ ಇದು ಕಾರ್ಯಸಾಧುವೇ ಎಂಬುದು ಮುಖ್ಯವಾಗುತ್ತದೆ.

    | ಅನಂತ ಕುಲಕರ್ಣಿ, ಬೇಸ್ ಸಂಸ್ಥೆ ಸಿಇಒ

    ಸಿಯುಇಟಿ ಪರಿಗಣನೆ?: ತಾಂತ್ರಿಕ ಕೋರ್ಸ್​ಗಳ ಪ್ರವೇಶಕ್ಕೆ ಪ್ರಸ್ತುತ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗಳೊಂದಿಗೆ ಆಯಾ ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಗಳಿಗೂ ಹಾಜರಾಗುತ್ತಾರೆ. ಇಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆಗಳು ಇದ್ದೇ ಇರುತ್ತವೆ. ಜತೆಗೆ, ಕಳೆದೆರಡು ವರ್ಷಗಳಿಂದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್​ಗಳಿಗೆ ನಡೆಸಲಾಗುತ್ತಿರುವ ಪ್ರವೇಶ ಪರೀಕ್ಷೆಯಲ್ಲೂ (ಸಿಯುಇಟಿ) ವಿಜ್ಞಾನದ ಇದೇ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಹೀಗಾಗಿ ಭವಿಷ್ಯದಲ್ಲಿ ಇದೇ ಪರೀಕ್ಷೆಯ ವಿಜ್ಞಾನದ ವಿಷಯಗಳನ್ನು ಇಂಜಿನಿಯರಿಂಗ್ ಕೋರ್ಸ್​ಗಳ ಪ್ರವೇಶಕ್ಕೂ ಪರಿಗಣಿಸಬಹುದು ಎಂಬ ಆಶಯವನ್ನು ಹೊಂದಲಾಗಿದೆ.

    ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts