ನ್ಯೂಸ್

ಆರತಕ್ಷತೆಗೂ ಮುನ್ನ ನವದಂಪತಿ ನಡುವೆ ವಾಗ್ವಾದ; ಪತ್ನಿಯನ್ನು ಇರಿದು ತಾನೂ ಪ್ರಾಣ ಬಿಟ್ಟ ಗಂಡ!

Bengaluru - General - Rama Kishan K V

ರಾಯ್​ಪುರ: ನವದಂಪತಿ ನಡುವೆ ನಿಗದಿಯಾಗಿದ್ದ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ವಾಗ್ವಾದ ನಡೆದಿದ್ದು, ಪತಿ ಚಾಕುವಿನಿಂದ ಪತ್ನಿಯನ್ನು ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಬ್ರಿಜ್​​ ನಗರದಲ್ಲಿ ನಡೆದಿದೆ. ಘಟನೆಯಿಂದ ಆರತಕ್ಷತೆಯ ಸಂಭ್ರಮದಲ್ಲಿದ್ದ ಮಂದಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ತಿಕ್ರಪಾರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು ಚಾಕುವಿನಿಂದ ಇರಿತಕ್ಕೊಳಗಾದ ಗಾಯಗಳೊಂದಿಗೆ ಮೃತದೇಹ ಪತ್ತೆಯಾಗಿದೆ. ದಂಪತಿಗಳ ನಡುವೆ ಗಲಾಟೆ ಆರಂಭವಾಗಿದ್ದು, ಗಂಡ ಚಾಕುವಿನಿಂದ ಪತ್ನಿಗೆ ಇರಿದು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಅಸ್ಲಾಂ(24) ಹಾಗೂ ಕಹ್ಕಶಾ ಬಾನೊ(22) ಮೃತಪಟ್ಟ ನವದಂಪತಿ. ಇವರಿಬ್ಬರ ಮದುವೆ ಕಳೆದ ಭಾನುವಾರ(ಫೆ.19) ನಡೆದಿದ್ದು, ಮಂಗಳವಾರ(ಫೆ.21) ರಾತ್ರಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಯಾರೂ ಊಹಿಸಿರದ ಘಟನೆ ನಡೆದಿದೆ. ನವ ದಂಪತಿಗಳಿದ್ದ ಕೋಣೆಯೊಳಗಿನಿಂದ ವಧುವಿನ ಕಿರುಚಾಟ ಕೇಳಿಸಿ, ಗಾಬರಿಯಲ್ಲಿ ವರನ ತಾಯಿ ಬಂದು ನೋಡಿದಾಗ ಮೃತದೇಹ ಕಂಡು ಬಂದಿದೆ ಎಂದು ವರದಿಯಾಗಿದೆ.

ಕೋಣೆಯ ಒಳಗಿನಿಂದ ಬೀಗ ಹಾಕಲ್ಪಟ್ಟಿದ್ದು, ಕಿಟಕಿಯಿಂದ ಇಣುಕಿ ನೋಡಿದಾಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲನ್ನು ಒಡೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೃತ್ಯಕ್ಕೆ ಬಳಸಲಾಗಿರುವ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)