ನ್ಯೂಸ್

2 ವರ್ಷ ಪ್ರೀತಿ, ಮೂರು ತಿಂಗಳ ದಾಂಪತ್ಯ! ಇಷ್ಟಪಟ್ಟಿದ್ದು ಸಿಕ್ಕರೂ ಕಂಡಿದ್ದು ಮಾತ್ರ ದುರಂತ ಅಂತ್ಯ | Newly Married

ಮೋಹನ್​ ಶೆಟ್ಟಿ

ತಿರುವನಂತಪುರಂ: ಮೂರು ತಿಂಗಳ ಹಿಂದೆಯಷ್ಟೇ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಿದ್ದ ಯುವತಿ (Newly Married), ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾದ ಶಾಕಿಂಗ್​​ ಘಟನೆ ಕೇರಳದ ಪಲೋಡ್‌ನ ಇಲವತ್ತಂನಲ್ಲಿ ವರದಿಯಾಗಿದೆ.

ಮೃತರನ್ನು ಕೊಳಚ್ಚಲ್ ಕೊನ್ನಮೂಡು, ಇಡಿಂಜಾರು, ಪಾಲೋಡು ನಿವಾಸಿ ಇಂದುಜಾ (25) ಎಂದು ಗುರುತಿಸಲಾಗಿದ್ದು, ಶುಕ್ರವಾರ (ಡಿ.06) ಮಧ್ಯಾಹ್ನ ಆಕೆಯ ಪತಿ ಅಭಿಜಿತ್ ಊಟಕ್ಕೆ ಮನೆಗೆ ಬಂದಾಗ ಎರಡನೇ ಮಹಡಿಯ ಬೆಡ್ ರೂಮಿನಲ್ಲಿ ಆಕೆ ನೇಣು ಬಿಗಿದುಕೊಂಡಿರುವ ದೃಶ್ಯ ಕಿಟಕಿಯಲ್ಲಿ ಕಂಡುಬಂದಿದೆ. ಇದನ್ನು ನೋಡಿ ಗಾಬರಿಗೊಂಡ ಪತಿ, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾವಿನ ಸುತ್ತ ಅನುಮಾನದ ಹುತ್ತ

ಇಂದುಜಾ ನೇಣುಬಿಗಿದುಕೊಂಡ ಸ್ಥಿತಿಯಲ್ಲಿರುವುದನ್ನು ಕಂಡ ಪತಿ, ಸಮಯ ವ್ಯರ್ಥ ಮಾಡದೆ ಆಕೆಯನ್ನು ನೆಡುಮಂಗಡ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವತಿಯನ್ನು ಪರಿಶೀಲಿಸಿದ ವೈದ್ಯರು, ಆಕೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದ ಇಂದುಜಾ, ಹೆತ್ತವರ ವಿರೋಧ ಕಟ್ಟಿಕೊಂಡೇ ಅಭಿಜಿತ್​ರನ್ನು ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ಅತ್ತೆ ಮನೆಯಲ್ಲಿದ್ದ ಇಂದುಜಾಳ ಸಾವು ಸದ್ಯ ಅನುಮಾನದಿಂದ ಕೂಡಿದೆ.

ಅತ್ತೆ ಹೇಳಿಕೆಯಲ್ಲಿ ಭಿನ್ನ

ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಉದ್ಯೋಗಿಯಾಗಿದ್ದರೆ, ಅಭಿಜಿತ್ ಕೂಡ ಖಾಸಗಿ ವಾಹನ ಕಂಪನಿಯ ಉದ್ಯೋಗಿಯಾಗಿ ಜೀವನ ನಡೆಸುತ್ತಿದ್ದರು. ಘಟನೆ ನಡೆದಾಗ ಅಭಿಜಿತ್ ಅವರ ಅಜ್ಜಿ ಮಾತ್ರ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಇಂದುಜಾಗೆ ಅವರ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದ್ದೇ ಆದರೂ ಆಗಾಗ್ಗೆ ಆಕೆ ತನ್ನ ತಾಯಿ ಮತ್ತು ಸಹೋದರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಯುವತಿಯ ಅತ್ತೆ ಹೇಳಿದ್ದಾರೆ. ಘಟನೆ ಸಂಬಂಧ ಪಾಲೊಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).