ನ್ಯೂಸ್

ಮಗನ ನಿಶ್ಚಿತಾರ್ಥ ಮುಗಿಸಿ ಹೊಸ ಕಾರು ಖರೀದಿಸಿ ಖುಷಿಯಿಂದಲೇ ಮನೆಗೆ ಹೊರಟವರು ಸೇರಿದ್ದು ಮಸಣಕ್ಕೆ!

ವಿಜಯವಾಡ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಆಕಸ್ಮಿಕವಾಗಿ ಕಾಲುವೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕೊಟಿಪಲ್ಲಿ ಕೋಟಾ ಗ್ರಾಮದಲ್ಲಿ ನಡೆದಿದೆ.

ಘಟನೆಯು ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಬೆಳಗ್ಗೆ ಸ್ಥಳೀಯರು ಕಾಲುವೆಯಲ್ಲಿ ಮುಳುಗಿದ್ದ ಕಾರಿನಲ್ಲಿ ಮೃತದೇಹಗಳನ್ನು ಕಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರನ್ನು ಕೆ. ಸೀತಾರಾಮ ಸತ್ಯ ಪ್ರಸಾದ್​, ಪತ್ನಿ ಕೆ. ವಿಜಯಲಕ್ಷ್ಮೀ ಮತ್ತು ಅವರ ಕಿರಿಯ ಮಗ ಕೆ. ಸತ್ಯ ಸಂತೋಷ್​ ಎಂದು ಗುರುತಿಸಲಾಗಿದೆ.

ಪೊಲೀಸ್​ ಮೂಲಗಳ ಪ್ರಕಾರ ಮೃತರು ಪುದುಚೇರಿಯ ಯನಮ್​ ನಿವಾಸಿಗಳು. ಗುರುವಾರ ಮಗ ಸತ್ಯ ಸಂತೋಷ್​ ನಿಶ್ಚಿತಾರ್ಥಕ್ಕೆ ಪೂರ್ವ ಗೋದಾವರಿಯ ರಾಜಮಂಡ್ರಿಗೆ ತೆರಳಿದ್ದರು. ಸತ್ಯ ಅವರು ಬ್ಯಾಂಕ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದರು.

ನಿಶ್ಚಿತಾರ್ಥ ಸಮಾರಂಭ ಮುಗಿಸಿಕೊಂಡು, ಮೂವರು ರಾಜಮಂಡ್ರಿಯಲ್ಲಿ ಹೊಸ ಕಾರು ಖರೀದಿಸಿದ್ದರು. ಬಳಿಕ ಹೊಸ ಕಾರಿನಲ್ಲಿ ಮನೆಗೆ ಮರಳುವಾಗ ದುರಂತ ಸಂಭವಿಸಿದೆ. ಕಾರಿನ ಸಮೇತ ಮೂವರು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಸಹ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)