ನ್ಯೂಸ್

ಹೊಸ ವರ್ಷಾಚರಣೆ: ನಂದಿ ಬೆಟ್ಟಕ್ಕಿಲ್ಲ ಪ್ರವೇಶ, ಇಂದು ಸಂಜೆ 6ರಿಂದ ನಾಳೆ ಬೆಳಗ್ಗೆ 6ರವರೆಗೆ ಪ್ರವಾಸಿಗರಿಗೆ ನಿಷೇಧ

ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಮುಂಜಾಗ್ರತಾ ಕ್ರಮವಾಗಿ ನಂದಿಗಿರಿ ಧಾಮದಲ್ಲಿ ಈ ಭಾರಿಯೂ ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಜಿಲ್ಲಾಡಳಿತವು ಡಿ.31ರ ಸಂಜೆ 6ರಿಂದ ಜ.1ರ ಬೆಳಗ್ಗೆ 6ರವರೆಗೆ ಗಿರಿಧಾಮ ಪ್ರವೇಶಿಸಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.

ಕರ್ನಾಟಕದ ಊಟಿ ಎಂದೇ ಪ್ರಖ್ಯಾತಿ ಹೊಂದಿರುವ ಗಿರಿಧಾಮಕ್ಕೆ ಬರುವ ಹೆಸರಿನಲ್ಲಿ ಮದ್ಯಸೇವನೆ, ಅನೈತಿಕ ಚಟುವಟಿಕೆ, ಗಲಾಟೆ ಮತ್ತು ಹಲ್ಲೆ ಸೇರಿದಂತೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮಧ್ಯರಾತ್ರಿಯ ಸಂಭ್ರಮಕ್ಕೆ ಬ್ರೇಕ್​ ಹಾಕಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಂದ ತುಂಬಿ ತುಳುಕಾಡುವ ನಂದಿ ಗಿರಿಧಾಮ, ಸ್ಕಂದಗಿರಿ, ಆವಲಬೆಟ್ಟವನ್ನು ನಿಷೇಧಿತ ಅವಧಿಯಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ನಿಯಮವನ್ನು ಉಲ್ಲಂಘಿಸದಿರಲು ಜಿಲ್ಲಾಡಳಿತ ತಿಳಿಸಿದೆ.

ಈಗಾಗಲೇ ನಂದಿ ಗಿರಿಧಾಮದಲ್ಲಿ ಚೆಕ್​ ಪೋಸ್ಟ್​ ಕಾರ್ಯ ನಿರ್ವಹಿಸುತ್ತಿದ್ದು, ಹೊಸ ವರ್ಷದ ದಿನದಂದು ಮತ್ತಷ್ಟು ಬಂದೋಬಸ್ತ್​ ಕೈಗೊಳ್ಳುವಲ್ಲಿ ಪೊಲೀಸ್​ ಇಲಾಖೆ ಸಜ್ಜಾಗಿದೆ.