ಹೈದರಾಬಾದ್: ನಗರದ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಯಾವ ರೀತಿ ಸುಲಭವಾಗಿ ಹಣ ಗಳಿಸಬಹುದು ಎಂದು ಹಲವು ವಂಚಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಮತ್ತು ಅವರ ದುರಾಸೆಯಿಂದಾಗಿ ಅಮಾಯಕರು ಮೋಸ ಹೋಗುತ್ತಿದ್ದಾರೆ. ಅದರಲ್ಲೂ ಈ ಸೈಬರ್ ಕ್ರಿಮಿನಲ್‌ಗಳು ಜನಸಾಮಾನ್ಯರು, ಸೆಲೆಬ್ರಿಟಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ಲಕ್ಷಗಟ್ಟಲೆ ಲೂಟಿ ಮಾಡುತ್ತಿದ್ದಾರೆ. ಕಾಲ ಬದಲಾದಂತೆ ವಂಚಕರ ವಂಚನೆ ಮಾಡುವ ರೀತಿಯು ಕೂಡ ಬದಲಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಮತ್ತೊಂದು ಹೊಸ ರೀತಿಯ ವಂಚನೆ ಬೆಳಕಿಗೆ ಬಂದಿದೆ. ಆದರೆ ಈ ಬಾರಿ ಸೈಬರ್ ಕ್ರಿಮಿನಲ್ಗಳ ಟಾರ್ಗೆಟ್ ಹುಡುಗಿಯರು ಎಂದು ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹುಬ್ಬಳ್ಳಿ ಹುಲಿ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.
ನಗರದಲ್ಲಿ ಸೈಬರ್ ಕ್ರಿಮಿನಲ್‌ಗಳು ಶಾಲಾ-ಕಾಲೇಜುಗಳಿಗೆ ಬರುವ ಹುಡುಗಿಯರನ್ನು ಗುರಿಯಾಗಿಸುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರ ಹೆಸರಲ್ಲಿ ಪಾಲಕರಿಗೆ ವಾಟ್ಸಾಪ್ ಕರೆ ಮಾಡುತ್ತಿದ್ದು, ಕೇಳುವಷ್ಟು ಹಣ ಕೊಡದಿದ್ದರೆ ಅಪಹರಣಕಾರರು ಕೊಂದು ಹಾಕುತ್ತಾರೆ ಎಂದು ಹೇಳಿ ಭಯ ಹುಟ್ಟಿಸುತ್ತಾರೆ ಎಂದು ವಿಶ್ವನಾಥ್ ಸಜ್ಜನರ್ ಎಚ್ಚರಿಸಿದ್ದಾರೆ.
ಇತ್ತೀಚೆಗಷ್ಟೇ ಹೈದರಾಬಾದಿನ ರಾಯದುರ್ಗಂನಲ್ಲಿರುವ ವಿದ್ಯಾರ್ಥಿನಿಯೊಬ್ಬಳ ಪಾಲಕರಿಗೆ ಸೈಬರ್ ಕ್ರಿಮಿನಲ್‌ಗಳು ವಿದೇಶಿ ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸಾಪ್ ಕರೆ ಮಾಡಿದ್ದಾರೆ. ಬಳಿಕ ನಾನೊಬ್ಬ ಪೊಲೀಸ್ ಅಧಿಕಾರಿ, ಕಾಲೇಜಿಗೆ ಹೋಗುತ್ತಿದ್ದ ನಿಮ್ಮ ಮಗಳನ್ನು ಕಿಡ್ನಾಪ್ ಮಾಡಲಾಗಿದೆ. ಕೇಳಿದಷ್ಟು ಹಣ ಕೊಡದಿದ್ದರೆ ನಿಮ್ಮ ಹುಡುಗಿಯನ್ನು ಕೊಲ್ಲುವುದಾಗಿ ಅಪಹರಣಕಾರರು ಬೆದರಿಕೆ ಹಾಕಿದ್ದಾರೆ. ನಿಮ್ಮ ಹುಡುಗಿ ಅಳುತ್ತಿದ್ದಾಳೆ ಎಂದು ಹೇಳಿ ಹಿನ್ನೆಲೆಯಲ್ಲಿ ಹುಡುಗಿ ಅಳುವ ಧ್ವನಿಯನ್ನು ಸಹ ಕೇಳಿಸುತ್ತಾರೆ. ಅಳುವ ದನಿ ಕೇಳಿದ ಪಾಲಕರು ಕಾಲೇಜಿಗೆ ಹೋಗಿದ್ದ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಆತಂಕಗೊಂಡು ಹಣ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ನಡೆದ ಘಟನೆಯನ್ನು ಸಂಬಂಧಿಕರಿಗೆ ತಿಳಿಸಿ, ಮಗಳು ಕಾಲೇಜಿನಲ್ಲಿ ಇದ್ದಾಳೆಯೇ ಎಂದು ತಿಳಿದುಕೊಳ್ಳಲು ಕಳುಹಿಸಿದ್ದಾರೆ. ಕಾಲೇಜಿಗೆ ತೆರಳಿದ ಸಂಬಂಧಿಕರು ನಿಮ್ಮ ಮಗಳು ಚೆನ್ನಾಗಿದ್ದಾಳೆ, ಕಿಡ್ನಾಪ್ ಆಗಿಲ್ಲ ಎಂದು ಹೇಳಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಲ್ಲಿಯವರೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದು ಯಾರು ಎಂದು ಅನುಮಾನಗೊಂಡ ಪಾಲಕರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿಶ್ವನಾಥ್ ಸಜ್ಜನರ್, ತೆಲುಗು ರಾಜ್ಯಗಳಲ್ಲಿ ಇಂತಹ ಹಲವು ಬೆದರಿಕೆಗಳಿವೆ ಎಂದು ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.
ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಪೊಲೀಸರ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ಹಣ ಕೇಳುತ್ತಿದ್ದಾರೆ. ವಿದೇಶಿ ದೂರವಾಣಿ ಸಂಖ್ಯೆಗಳೊಂದಿಗೆ ಅಪರಿಚಿತರಿಂದ ಬರುವ ವಾಟ್ಸಾಪ್ ಕರೆಗಳಿಗೆ ಯಾರೂ ಪ್ರತಿಕ್ರಿಯಿಸಬಾರದು. ಅಲ್ಲದೆ ಇವರ ಬೆದರಿಕೆಗೆ ಹೆದರದೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ, ಸೈಬರ್ ಅಪರಾಧಗಳ ವಿರುದ್ಧ ಎಲ್ಲರೂ ಜಾಗೃತರಾಗಬೇಕು ಎಂದು ಸಜ್ಜನರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್)