New Orleans: ಹೊಸ ವರ್ಷವನ್ನು ಸ್ವಾಗತಿಸಲು ಅಮೆರಿಕದ ನ್ಯೂಆರ್ಲಿನ್ಸ್ನ ಬೌರ್ಬನ್ ರಸ್ತೆಯಲ್ಲಿ ಸೇರಿದ್ದ ಸಹಸ್ರಾರು ಸಂಖ್ಯೆಯ ಜನರು, ಕೇಕ್ ಕತ್ತರಿಸಿ, ಮೋಜು-ಮಸ್ತಿಯಲ್ಲಿ ತೊಡಗಿದ್ದ ಸಮಯದಲ್ಲೇ ಜನಸಂದಣಿ ಮಧ್ಯೆ ಶಂಸುದ್-ದಿನ್ ಜಬ್ಬಾರ್ ಎಂದು ಹೇಳಲಾದ ಶಂಕಿತ ಭಯೋತ್ಪಾದಕ ವೇಗವಾಗಿ ಟ್ರಕ್ವೊಂದನ್ನು ನುಗ್ಗಿಸಿ ಕನಿಷ್ಠ 15 ಜನರ ಜೀವ ಬಲಿಪಡೆದ ಭಯಾನಕ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: P. Rajeev Statement | ಸಿದ್ರಾಮಯ್ಯನವ್ರೆ ಸುಪಾರಿ ಕೊಡುವ ವ್ಯಕ್ತಿಯನ್ನು ಮಂತ್ರಿಮಂಡಲದಲ್ಲಿ ಹೇಗ್ರಿ ಇಟ್ಟು ಕೊಳ್ತಿರಿ..?
ಭೀಕರ ಘಟನೆಯ ದೃಶ್ಯಗಳು ಭದ್ರತೆಯ ಉದ್ದೇಶದಿಂದ ಅಳವಡಿಸಲಾಗಿದ್ದ ಹೆಚ್ಚುವರಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಭಯಾನಕ ದಾಳಿಯಲ್ಲಿ ಕನಿಷ್ಠ 15 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 35ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪೊಲೀಸರು ಟ್ರಕ್ ಹತ್ತಿಸಿದ ವ್ಯಕ್ತಿ ಶಮ್ಸುದ್–ದಿನ್ ಬಹರ್ ಜಬ್ಬಾರ್‌ನನ್ನು ಶಂಕಿತ ಭಯೋತ್ಪಾದಕ ಎಂದು ತಿಳಿಸಿದ್ದು, ಟ್ರಕ್ನಲ್ಲಿ ಐಸಿಸ್ ಧ್ವಜ ಇರುವುದು ಪತ್ತೆಯಾಗಿದೆ ಎಂದಿದ್ದಾರೆ. ಹೊಸ ವರ್ಷದ ದಿನವೇ ಹೀಗಾಗಿದ್ದು ಸ್ಥಳೀಯರಲ್ಲಿ ಭಾರೀ ಆಘಾತ ತಂದಿದ್ದು, ತಮ್ಮ ಮನೆಯಿಂದ ಹೊರಬರಲು ಆತಂಕ ಸೃಷ್ಟಿಸಿದೆ.
ಹೊಸ ವರ್ಷದ ದಿನದಂದು ನ್ಯೂ ಆರ್ಲಿನ್ಸ್ನಲ್ಲಿ ಪಾರ್ಟಿ, ಸಂಭ್ರಮಾಚರಣೆಯ ಸಲುವಾಗಿ ಕಿಕ್ಕಿರಿದಿದ್ದ ಜನಸಂದಣಿ ಮಧ್ಯೆ ಟ್ರಕ್ ಹರಿಸಿದ 42 ವರ್ಷದ ಜಬ್ಬಾರ್ ದಾಳಿಯ ಹಿಂದೆ ಯಾರೆಲ್ಲಾ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಚುರುಕು ತನಿಖೆ ಕೈಗೊಂಡಿದ್ದಾರೆ. ಹೊಸ ವರ್ಷದ ನಿಮಿತ್ತ ಪೊಲೀಸರ ಬಿಗಿ ಬಂದೋಬಸ್ತ್ ಮತ್ತು ಭಾರೀ ಭದ್ರತೆಯ ನಡುವೆ ಈ ಘಟನೆ ಸಂಭವಿಸಿರುವುದು ಸದ್ಯ ಸ್ಥಳೀಯರಲ್ಲಿ ಅನುಮಾನ ಹುಟ್ಟುಹಾಕಿದೆ. ಇದು ಅಲ್ಲಿನ ಆಡಳಿತ ವ್ಯವಸ್ಥೆ ಹಾಗೂ ಪೊಲೀಸರು ಒದಗಿಸಿದ ಭದ್ರತೆ ಮೇಲೆ ಹಲವಾರು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ಮುಂಜಾನೆ 3:15ರ ಸುಮಾರಿಗೆ ಕೆನಾಲ್ ಮತ್ತು ಬೌರ್ಬನ್ ಸ್ಟ್ರೀಟ್‌ಗಳ ಛೇದನದ ಬಳಿ ದಾಳಿ ಸಂಭವಿಸಿರುವುದಾಗಿ ವರದಿ ಉಲ್ಲೇಖಿಸಿವೆ,(ಏಜೆನ್ಸೀಸ್).