ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ದೊರೆಯುವ ನಿಟ್ಟಿನಲ್ಲಿ ಹೊಸ ಎಂಪ್ಲಾಯ್ಮೆಂಟ್ ಪಾಲಿಸಿ ಸಿದ್ಧಪಡಿಸಿ, ಹೆಚ್ಚು ಉದ್ಯೋಗ ಒದಗಿಸುವ ಸಂಸ್ಥೆಗೆ ಪ್ರೋತ್ಸಾಹಧನ (ಇನ್ಸೆಂಟಿವ್) ಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಅರಮನೆ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ಉದ್ಯಮಿಯಾಗು- ಉದ್ಯೋಗ ನೀಡು’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿದ ರಾಜ್ಯ ಕರ್ನಾಟಕ. ಇಲ್ಲಿ ಉನ್ನತ ಮಟ್ಟದ ಶಿಕ್ಷಣ, ವೃತ್ತಿಪರ ತರಬೇತಿ ಹಾಗೂ ಉದ್ಯೋಗ ಲಭ್ಯವಾಗುತ್ತಿದೆ. ಈಸ್ ಆಫ್ ಡೂಯಿಂಗ್ ಅಸ್ತಿತ್ವದಲ್ಲಿದ್ದು, ಎಲ್ಲ ಉದ್ಯಮಗಳ ಆರಂಭಕ್ಕೆ ಹೆಚ್ಚಿನ ಪ್ರಾಶಸ್ಱ ನೀಡಲಾಗುತ್ತಿದೆ. ಉದ್ಯಮ ಸ್ಥಾಪನೆಗೆ ಬೇಕಾದ ಭೂ ಪರಿವರ್ತನೆ ಕುರಿತ ದಶಕಗಳ ಸಮಸ್ಯೆಯನ್ನು ಯಡಿಯೂರಪ್ಪ ಇತ್ಯರ್ಥ ಮಾಡಿ ಸರಳೀಕರಣ ಮಾಡಿದ್ದಾರೆ. ಅವರ ಆಶೀರ್ವಾದ ಎಲ್ಲರ ಮೇಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕೈಗಾರಿಕಾ ನೀತಿ ಜತೆಗೆ ‘ಎಂಪ್ಲಾಯ್ಮೆಂಟ್ ಪಾಲಿಸಿ’ ಜಾರಿಗೂ ಸರ್ಕಾರ ಸಿದ್ಧವಾಗಿದೆ. ಈ ಬಗ್ಗೆ ಈಗಾಗಲೆ ರೂಪುರೇಷೆ ಸಿದ್ಧವಾಗುತ್ತಿದ್ದು, ಶೀಘ್ರ ಯೋಜನೆ ಜಾರಿ ಗೊಳಿಸಲಾಗುವುದು. ದೇಶದಲ್ಲಿ ಮೊದಲ ಬಾರಿಗೆ ‘ಸಂಶೋಧನೆ ಮತ್ತು ಅಭಿವೃದ್ಧಿ’ (ಆರ್ಎನ್ಡಿ) ಪಾಲಿಸಿ ಕೂಡ ಸಿದ್ಧಪಡಿಸಲಾಗುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಇದನ್ನು ಅನ್ವಯ ಮಾಡಲಾಗುವುದು. ಕೈಗಾರಿಕಾ ಇಲಾಖೆಯಿಂದ ಎಲ್ಲ ಉದ್ಯಮ ಕ್ಷೇತ್ರಗಳಿಂದ ವಾರ್ಷಿಕ 2 ತಿಂಗಳು ಉದ್ಯೋಗ ಕೌಶಲ ತರಬೇತಿ ಕೊಡಿಸಲು ಯೋಜನೆ ರೂಪಿಸಲಾಗುತ್ತದೆ. ಬೆಂಗಳೂರು ಅತಿ ಹೆಚ್ಚು ಸ್ಟಾರ್ಟ್ಅಪ್ ಹೊಂದಿದ ನಗರವಾಗಿದೆ. ಕರ್ನಾಟಕ ಉದ್ದಿಮೆ ಸ್ಥಾಪನೆಗೆ ಪ್ರಾಶಸ್ಱವಾದ ಸ್ಥಳವಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಸ್ವಾತಂತ್ರ್ಯ ದಿನಾಚರಣೆಯಂದು ಹೇಳಿದಂತೆ 75 ಸ್ಟಾರ್ಟ್ ಅಪ್ ನಿರ್ಮಾಣ ಮತ್ತು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ 75 ಸಾವಿರ ಯುವಕರಿಗೆ ಕೌಶಲ ತರಬೇತಿ ಶೀಘ್ರ ಕಾರ್ಯಗತ ಆಗಲಿದೆ. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ದೇಶದಲ್ಲಿ ಅತಿ ಹೆಚ್ಚು ಇಥೆನಾಲ್ ಉತ್ಪಾದಿಸುವ ಉದ್ಯಮಿಗಳಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಜತೆಗೆ ಕೃಷಿ ಉತ್ಪನ್ನಗಳ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಎಂಟಿಬಿ ನಾಗರಾಜ್ ಕೂಡ ರಾಜ್ಯದ ಮೂಲೆ ಮೂಲೆಗೂ ಗುಣಮಟ್ಟದ ಇಟ್ಟಿಗೆ ಮಾರಾಟ ಮಾಡಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಯುವಜನರು ಕೂಡ ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಉದ್ಯಮ ಸಮಸ್ಯೆಗಳಿಗೆ ಎನ್ಇಪಿ ಪರಿಹಾರ: ರಾಜ್ಯದಲ್ಲಿ ಪ್ರಸ್ತುತ ಉದ್ಯಮ ಕ್ಷೇತ್ರ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಹಾರವಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಎನ್ಇಪಿ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಉದ್ಯಮ ಸಂಸ್ಕೃತಿ ಬೆಳೆಸಲಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಯುವಕರಿಗೆ ಕೌಶಲ ಬೆಳೆಸಲು ಕೌಶಲಾಭಿವೃದ್ಧಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಯುವಜನರು ಲಭ್ಯ ಉದ್ಯೋಗ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅಗತ್ಯ ತರಬೇತಿ ನೀಡಲು ರಾಮನಗರದಲ್ಲಿ ‘ಸ್ಕಿಲ್ ಹಬ್’ ಸ್ಥಾಪಿಸಲಾಗುವುದು ಎಂದರು.
ಸ್ವ-ಉದ್ಯಮಿಗಳಾಗಿ...: ವಿದ್ಯಾವಂತರು ಕೇವಲ ಸರ್ಕಾರಿ ಹುದ್ದೆಗಳನ್ನು ಬಯಸದೆ ಸ್ವತಃ ಉದ್ಯಮಗಳಾಗುವ ಮೂಲಕ ದೇಶದ ಪ್ರಗತಿಯಲ್ಲಿ ಕೈ ಜೋಡಿಸಬೇಕು. ಉದ್ಯಮಿಯಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡಬಹುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. 2010-12ರಲ್ಲಿ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ 10.84 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 15 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು. ಇಂದಿನ ಕಾರ್ಯಾಗಾರದಿಂದಲೂ ಹೆಚ್ಚಿನ ಉದ್ಯೋಗ ಸಿಗುವ ಅವಕಾಶವಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 62,085 ಕೋಟಿ ರೂ. ವಿದೇಶಿ ನೇರ ಬಂಡವಾಳ ಆಕರ್ಷಿಸಿ, ರಾಜ್ಯ ಮೊದಲ ಸ್ಥಾನದಲ್ಲಿದೆ. 2020-21ರಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿತ್ತು ಎಂದು ತಿಳಿಸಿದರು.
ಕಾಯ್ದೆ ತಿದ್ದುಪಡಿಗಳಿಂದ ಫಲ: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರಾಶಸ್ಱ ನೀಡಲಾಗಿದ್ದು, ಕಳೆದ ವರ್ಷ ಕೋವಿಡ್ ನಡುವೆಯೂ ಅತಿ ಹೆಚ್ಚು ಬಂಡವಾಳ ಹರಿದುಬಂದಿದೆ. ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನ ಉದ್ಯಮ ಚೇತರಿಕೆಗೆ ಹಾದಿಯಾಗಿದ್ದು, ಕ್ರಾಂತಿಕಾರಿ ನೀತಿಗಳನ್ನು ತರಲು ಸಾಧ್ಯವಾಯಿತು. ಉದ್ಯಮ ಸ್ಬೇಹಿ ವಾತಾವರಣ ನಿರ್ವಿುಸಲು ಕೆಲವು ಕಾಯ್ದೆ ಮತ್ತು ಕಾನೂನು ತಿದ್ದುಪಡಿ ಜಾರಿಗೊಳಿಸಿದ್ದು, ಅವುಗಳು ಈಗ ಫಲ ನೀಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. 2022ರ ಬಂಡವಾಳ ಹೂಡಿಕೆ ಸಮಾವೇಶವೂ ಯಶಸ್ವಿ ಆಗಲಿದ್ದು, ರಾಜ್ಯ ಮೊದಲ ಸ್ಥಾನ ಉಳಿಸಿಕೊಳ್ಳಲಿದೆ. ಇನ್ನು ಬಂಡವಾಳ ವಿಕೇಂದ್ರೀಕರಣ ನೀತಿ ಅನುಸರಿಸಿ 2 ಮತ್ತು 3ನೇ ಹಂತದ ನಗರಗಳ ಬೆಳವಣಿಗೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಎಂಎಸ್ಎಂಇ ಅಭಿವೃದ್ಧಿಗೆ ಚೆನ್ನೈ-ಬೆಂಗಳೂರು ಮತ್ತು ಮುಂಬೈ- ಬೆಂಗಳೂರು ಕಾರಿಡಾರ್ಗಳಲ್ಲಿ ಪಿಪಿಪಿ ಮಾದರಿಯಲ್ಲಿ ಕೈಗಾರಿಕಾ ಟೌನ್ಶಿಪ್ ಅಭಿವೃದ್ಧಿ ಮಾಡಲಾಗುವುದು. ಪೀಣ್ಯ ಕೈಗಾರಿಕಾ ಪ್ರದೇಶವನ್ನು 100 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ. ಈಗಾಗಲೆ 11 ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಿದ್ದು, ಇನ್ನೂ 7 ಕ್ಲಸ್ಟರ್ ಸ್ಥಾಪನೆ ಹಂತದಲ್ಲಿವೆ.| ಎಂ.ಟಿ.ಬಿ. ನಾಗರಾಜ್ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ2022ರ ನ.2ರಿಂದ ಮೂರು ದಿನಗಳ ಕಾಲ 3ನೇ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಲಾಗುವುದು. ಈ ಸಮಾವೇಶದಿಂದ ರಾಜ್ಯಕ್ಕೆ ದೇಶ-ವಿದೇಶದಿಂದ ಹೆಚ್ಚಿನ ಬಂಡವಾಳ ಹರಿದು ಬರಲಿದೆ. ಇದರ ಪೂರ್ವತಯಾರಿಯಾಗಿ ರಾಜ್ಯದಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಲಾಗುತ್ತದೆ.| ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವಕಾರ್ಯಾಗಾರದಲ್ಲಿ 6 ಸಾವಿರ ವಿದ್ಯಾರ್ಥಿಗಳು: ಉದ್ಯಮಿಯಾಗು-ಉದ್ಯೋಗ ನೀಡಿ ಕಾರ್ಯಾಗಾರಕ್ಕೆ 500ಕ್ಕೂ ಅಧಿಕ ಕಾಲೇಜುಗಳಿಂದ ಸಾಮಾನ್ಯ ಪದವಿ ಮತ್ತು ವೃತ್ತಿಪರ ಕೋರ್ಸ್ಗಳ 6,266 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು ಆಗಮಿಸಿದ್ದರು. ಆದರೆ, ಮುಖ್ಯಮಂತ್ರಿ ಮತ್ತು ಸಚಿವರ ಭಾಷಣ ಮುಗಿಯುತ್ತಿದ್ದಂತೆ ಊಟಕ್ಕೆ ಎದ್ದು ಹೊರಟರು. ಯಶಸ್ವಿ ಉದ್ಯಮಿಗಳಾದ ಚೈತನ್ಯ ಅಡಪ, ಹೃಷಿಕೇಶ್ ಮಿಶ್ರ ಹಾಗೂ ವಿವೇಕಾನಂದ ಹಳಗೆರೆ ಸೇರಿ ಹಲವರು ಭಾಷಣ ಮಾಡಿದರೂ ಕೇಳಲು ವಿದ್ಯಾರ್ಥಿಗಳೇ ಇರಲಿಲ್ಲ.