ನ್ಯೂಸ್

ದೆಹಲಿ ಹಿಂಸಾಚಾರ, ಪೊಲೀಸ್​ ಅಧಿಕಾರಿ ಹತ್ಯೆ; ಆಪ್​ ಉಚ್ಚಾಟಿತ ಮುಖಂಡ ಸೋದರನ ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ಈಶಾನ್ಯ ದೆಹಲಿಯ ಚಾಂದ್​ಬಾಘ್​ ಹಿಂಸಾಚಾರದ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿ ತಾಹಿರ್​ ಹುಸೇನ್​ ಸೋದರ ಶಾ ಆಲಮ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲಿಸರು ಬೆನ್ನು ಬಿದ್ದಿರುವ ವಿಷಯ ತಿಳಿದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ.

ಆಮ್​ ಆದ್ಮಿ ಪಕ್ಷದ ಉಚ್ಚಾಟಿತ ಪಾಲಿಕೆ ಸದಸ್ಯ ತಾಹೀರ್​ ಹುಸೇನ್​ ಸಹೋದರ ಆಲಮ್​ನನ್ನು ಬಂಧಿಸಿದ ದೆಹಲಿ ಪೊಲೀಸರು, ಶಾ ಆಲಂ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಾರೆ. ದೆಹಲಿ ಕ್ರೈಂ ಬ್ರಾಂಚ್​ ಪೊಲೀಸರು ಆಲಮ್​ನನ್ನು ವಿಚಾರಣೆ ನಡೆಸುತ್ತಿದ್ದು ಅಂಕಿತ್​ ಶರ್ಮಾ ಕೊಲೆ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಚಾಂದ್​ಬಾಗ್​ನಲ್ಲಿ ಹಿಂಸಾಚಾರ ಬುಗಿಲೆದ್ದ ವೇಳೆ ಆಲಮ್​ ಅಲ್ಲಿ ಉಪಸ್ಥಿತನಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಭಾನುವಾರ (ಮಾ.08) ತಾಹೀರ್ ತಂದೆ, ಮಗ ಮತ್ತು ಕೆಲ ನೆರೆಹೊರೆಯವರನ್ನು ವಶಕ್ಕೆ ಪಡೆದಿದ್ದರು. ಇವರ ಮೇಲೆ ಈಶಾನ್ಯ ದೆಹಲಿ ಹಿಂಸಾಚಾರದ ಹಾಗೂ ಪೊಲೀಸ್ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್​ ಶರ್ಮಾ ಅವರ ಹತ್ಯೆ ಪ್ರಕರಣದಲ್ಲಿ ಭಾಗವಹಿಸಿರುವ ಆರೋಪವಿದೆ.

ತಾರಿಕ್​ ಹುಸೇನ್​, ಲಿಖಾಯತ್​, ರಿಯಾಸತ್​ ಮತ್ತು ತಾರಿಕ್​ ರಿಜ್ವಿ ಎಂಬುವವರನ್ನು ಬಂಧಿಸಿದ್ದರು. ಅಲ್ಲದೆ ತಾಹಿರ್​ ಪತ್ನಿಯನ್ನೂ ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದೆ.

ಹಿಂಸಾಚಾರದ ವೇಳೆ ಹತ್ಯೆಯಾಗಿದ್ದ ಅಧಿಕಾರಿ ಅಂಕಿತ್​ ಶರ್ಮಾ ಪ್ರಕರಣ ಸಂಬಂಧ ಆಪ್​ ಪಕ್ಷದ ಉಚ್ಚಾಟಿತ ಕೌನ್ಸಿಲರ್​ ತಾಹಿರ್​ ಹುಸೇನ್​ನನ್ನು ಮಾರ್ಚ್​ 5ರಂದು ಪೊಲೀಸರು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಪೊಲೀಸರ ಕಣ್ತಪ್ಪಿಸಿದ್ದ ತಾಹೀರ್​, ಮುಸ್ತಾಬಾದ್‌ನ ನೆಹರೂ ವಿಹಾರ್‌ಗೆ ಓಡಿಹೋಗಿದ್ದೆ, ನ್ಯಾಯಾಲಯದಲ್ಲಿ ಶರಣಾಗಲು ಬರುವ ಮೊದಲು ಎರಡು ದಿನ ಓಖ್ಲಾದಲ್ಲಿದ್ದೆ ಎಂದು ವಿಚಾರಣೆ ವೇಳೆ ತಾಹೀರ್​ ಪೊಲೀಸರಿಗೆ ತಿಳಿಸಿದ್ದಾನೆ.

ಮೃತ ಅಧಿಕಾರಿ ಅಂಕಿತ್​ ಅವರ ತಂದೆ ರವೀಂದ್ರ ಕುಮಾರ್​ ಅವರು ತನ್ನ ಮಗನ ಸಾವಿನ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದರು. ಕೊಲೆ ಪ್ರಕರಣದಲ್ಲಿ ತಾಹಿರ್​ ಕುಟುಂಬದ ಕೈವಾಡದ ಬಗ್ಗೆ ದೂರಿದ್ದರು. ಫೆ. 26ರಂದು ಚಾಂದ್​ಬಾಘ್​ ಪ್ರದೇಶದಲ್ಲಿ ಚರಂಡಿಯಲ್ಲಿ ಶವವಾಗಿ ಅಂಕಿತ್​ ಶರ್ಮಾ ಪತ್ತೆಯಾಗಿದ್ದರು. (ಏಜೆನ್ಸೀಸ್​)