ನ್ಯೂಸ್

ಇಂದಿನ ಸೋಂಕಿತರ ಸಂಖ್ಯೆ 9,894; ಗುಣವಾದವರು 8,402; ಒಂದೇ ದಿನ 104 ಜನರು ಕೋವಿಡ್​ಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ ಪೀಡಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಐದಾರು ದಿನಗಳಿಂದ ನಿತ್ಯವೂ 9 ಸಾವಿರಕ್ಕೂ ಅಧಿಕ ಹೊಸ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ.

ಭಾನುವಾರ ರಾಜ್ಯದಲ್ಲಿ 9,894 ಹೊಸ ಕೇಸ್​ಗಳು ವರದಿಯಾಗಿದ್ದು, ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 4,59,445ಕ್ಕೆ ಏರಿಕೆಯಾಗಿದೆ. ಕೋವಿಡ್​ನಿಂದ 104 ಜನರು ಮೃತಪಟ್ಟಿದ್ದು, ಒಟ್ಟು ಕೋವಿಡ್ ಸಾವಿನ ಸಂಖ್ಯೆ 7,265ಕ್ಕೆ ತಲುಪಿದೆ.

ಕೊಂಚ ಸಮಾಧಾನದ ಸಂಗತಿ ಎಂದರೆ, ಕೋವಿಡ್​ನಿಂದ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಭಾನುವಾರ 8,402 ಜನರು ಚೇತರಿಕೆ ಕಂಡಿದ್ದಾರೆ. ಒಟ್ಟು ಈವರೆಗೆ ಗುಣವಾದವರ ಸಂಖ್ಯೆ 3,52,958 ಆಗಿದೆ.

ಗಂಭೀರಾವಸ್ಥೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆಯೂ ಏರಿಕೆಯಾಗಿ 807ಕ್ಕೆ ತಲುಪಿದೆ. ಸಕ್ರಿಯ ಕೇಸ್​ಗಳ ಸಂಖ್ಯೆ 99,203ಕ್ಕೆ ಏರಿಕೆಯಾಗಿದೆ.

ಇನ್ನು, ರಾಜಧಾನಿಯಲ್ಲಿ 3,479 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,70,662ಕ್ಕೆ ತಲುಪಿದೆ. ಭಾನುವಾರ 3,270 ಜನರು ಚೇತರಿಕೆ ಕಂಡಿದ್ದು, ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರು 1,27,132 ಮಂದಿ. ಭಾನುವಾರದವರೆಗೆ ಸಕ್ರಿಯ ಕೇಸ್​ಗಳ ಸಂಖ್ಯೆ 41,093 ಆಗಿದೆ.

ರಾಜಧಾನಿಯಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 45 ಆಗಿದ್ದು, ಈವರೆಗೆ ಒಟ್ಟು 2,436 ಮಂದಿ ಸಾವಿಗೀಡಾಗಿದ್ದಾರೆ. ಮೈಸೂರಿನಲ್ಲಿ 15, ಬಳ್ಳಾರಿಯಲ್ಲಿ 8 ಜನ ಕೋವಿಡ್​ಗೆ ಬಲಿಯಾಗಿದ್ದಾರೆ.