ನ್ಯೂಸ್

ಸಹಕಾರ ಕ್ಷೇತ್ರದಲ್ಲಿನ ಭ್ರಷ್ಟಾಚಾರ ತಡೆಗೆ ಸರ್ಕಾರದಿಂದ ಹೊಸ ನೀತಿ: ಅಮಿತ್ ಷಾ

ಬೆಂಗಳೂರು: ರಾಜ್ಯಕ್ಕೆ ಭೇಟಿ ನೀಡಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಇದೀಗ ರಾಜಧಾನಿಯ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ಸಹಕಾರ ಕ್ಷೇತ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಸಹಕಾರ ಕ್ಷೇತ್ರ ಔಟ್ ಡೇಟೆಡ್ ಎಂದು ಲೇವಡಿ ಮಾಡಲಾಗಿತ್ತು. ಆದರೆ ಸಹಕಾರ ಕ್ಷೇತ್ರ ಸದೃಢವಾಗಿದೆ ಎಂದು ನಾನು ಹೇಳುತ್ತೇನೆ. ನಾನು ಚಿಕ್ಕ ವಯಸ್ಸಿನಲ್ಲೇ ಸಹಕಾರ ಆಂದೋಳನದಲ್ಲಿದ್ದು, ಸಹಕಾರ ಸಚಿವನಾಗಿದ್ದು ನಾನು ನನ್ನ ಮನೆಗೆ ವಾಪಸ್ ಬಂದಂತಾಗಿದೆ. ಸಹಕಾರ ಆಂದೋಳನ ಅತ್ಯಂತ ಯಶಸ್ವಿಯಾದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಎ ಗ್ರೇಡ್​ನಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಷಾ, ನಾನು ಇದರ ರೂವಾರಿ ಸಿದ್ದನಗೌಡ ರಾಮನಗೌಡ ಪಾಟೀಲರಿಗೆ ನಮಸ್ಕರಿಸಿ ಭಾಷಣ ಆರಂಭಿಸುತ್ತೇನೆ ಎಂದರು.

ಅಮುಲ್ ಸಂಸ್ಥೆ, ಲಿಜ್ಜತ್ ಪಾಪಡ್, ಇಫ್ಕೋ, ಕ್ರಿಪ್ಕೋಗಳು ಸಹಕಾರ ಆಂದೋಲನದ ಫಲಶ್ರುತಿಗಳು‌. ಕರ್ನಾಟಕದ ನಂದಿನಿ ಸಹ ಇದರಲ್ಲಿ ಮುಂಚೂಣಿಯಲ್ಲಿದೆ ಎಂದರು. ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ದೇಶದ ಹಾಲು ಉತ್ಪಾದಕರಿಗೆ ಆರಂಭವಾದ ಮೊದಲ ಬ್ಯಾಂಕ್, ರಾಜ್ಯದಲ್ಲಿ ಇದು ಮೊದಲು ಆರಂಭವಾಗಿದೆ ಎಂದು ಷಾ ತಿಳಿಸಿದರು. ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮೂಲಕ ಎಲ್ಲ ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸಿ, ಇದು ಕೇಂದ್ರ ಸರ್ಕಾರದ್ದೇ ಯೋಜನೆ, ಅದರ ಪೈಲಟ್ ಪ್ರಾಜೆಕ್ಟ್ ಕರ್ನಾಟಕದಿಂದಲೇ ಆರಂಭವಾಗಲಿ ಎಂದರು.

ಸಹಕಾರ ಕ್ಷೇತ್ರದಲ್ಲಿ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿವೆ, ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿ ನಿಲ್ಲದಿದ್ದರೆ ಸಹಕಾರ ಆಂದೋಲನಕ್ಕೆ ಕಷ್ಟವಿದೆ. ಹಾಗಾಗಿ ಸ್ವಾತಂತ್ರ್ಯ ಮಹೋತ್ಸವದ 75ನೇ ಮಹೋತ್ಸವದ ವೇಳೆಯಲ್ಲಿ ನಾವು ಒಂದು ಸಂಕಲ್ಪ ಮಾಡಬೇಕು, ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವೇಳೆಗೆ ನಾವು ಪ್ರತಿ ಕುಟುಂಬಕ್ಕೂ ಸಹಕಾರ ಆಂದೋಲನವನ್ನು ಮುಟ್ಟಿಸಿ ಬಡತನವನ್ನು ಹೊಡೆದೋಡಿಸಬೇಕಾಗಿದೆ ಎಂದು ಅವರು ಹೇಳಿದರು.

ಸಹಕಾರ ಕ್ಷೇತ್ರದಲ್ಲೂ ಭ್ರಷ್ಟಾಚಾರ ಕಾಲಿಟ್ಟಿದ್ದು, ಅದಕ್ಕೆ ಕೊನೆ ಹಾಡಬೇಕಿದೆ. ಅದಕ್ಕಾಗಿ ಪಾರದರ್ಶಕತೆ ತಂದು ಜನರಲ್ಲಿ ವಿಶ್ವಾಸ ಮೂಡಿಸಬೇಕು‌. ನೇಮಕಾತಿ, ಖರೀದಿ ವಿಷಯಗಳಲ್ಲಿ ಆನ್​ಲೈನ್ ವ್ಯವಸ್ಥೆ ಹಾಗು ಏಕರೂಪ ಚೈನ್ ಲಿಂಕ್ ನಿಯಮಾವಳಿ ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೊಸ ಸಹಕಾರ ನೀತಿಯನ್ನು ದೇಶದಲ್ಲಿ 2024ಕ್ಕೂ ಮೊದಲು ರೂಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅಮಿತ್ ಷಾ ತಿಳಿಸಿದರು.