ನ್ಯೂಸ್

ಪೊಲೀಸರ ನಿರ್ಧಾರ ನಾಗರಿಕರ ಕೇಂದ್ರಿತವಾಗಿರಬೇಕು :ಸಿಬಿಐ ನೂತನ ನಿರ್ದೇಶಕ ಪ್ರವೀಣ್ ಸೂದ್

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಾಗ ಪೊಲೀಸ್ ಸಿಬ್ಬಂದಿಯ ಜತೆಗೆ ನಾಗರಿಕರ ಕೇಂದ್ರಿತವಾಗಿರಬೇಕು ಎಂದು ಕೇಂದ್ರಿಯ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಪೊಲೀಸ್ ಇಲಾಖೆಯ ಸಿಬ್ಬಂದಿ ರಸ್ತೆಯಲ್ಲಿ ನಿಂತು ಹಗಲಿರುಳು ಕೆಲಸ ಮಾಡುತ್ತಾರೆ. ಪೊಲೀಸರು ಸಹ ಎಲ್ಲಾ ಇಲಾಖೆಗಳ ಉದ್ಯೋಗಿಗಳಂತೆ ರಜೆ ತೆಗೆದುಕೊಳ್ಳಬಹುದು. ಆದರೆ, ಸಿಬ್ಬಂದಿ ಆ ರೀತಿ ಮಾಡದೆ ದಿನದ 24 ತಾಸು ಕರ್ತವ್ಯದಲ್ಲಿರುತ್ತಾರೆ. ಹೀಗಾಗಿ ಸಿಬ್ಬಂದಿ ಜತೆಗೆ ಅವರ ಕುಟುಂಬದ ಬಗ್ಗೆಯೂ ಯೋಚಿಸಬೇಕು ಎಂದರು.

ನಾನು ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕನಾಗಿ ಇಲಾಖೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ಪೊಲೀಸರ ಜತೆಗೆ ಅನೌಪಚಾರಿಕವಾಗಿ ಮಾತನಾಡುವಾಗ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ತರಬೇತಿಗೆ ಆದ್ಯತೆ, ಕರ್ತವ್ಯ ನಿರ್ವಹಿಸಲು ಉತ್ತಮ ಪೊಲೀಸ್ ಠಾಣೆ ಹಾಗೂ ಕುಟುಂಬ ವಾಸಿಸಲು ಉತ್ತಮ ಮನೆ ಬೇಕು ಎಂಬ ಮೂರು ಬೇಡಿಕೆ ಗಮನಕ್ಕೆ ತಂದಿದ್ದರು. ಈ ಮೂರು ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ನಾವು ಕೈಗೊಂಡ ಹಲವು ಕಾರ್ಯಕ್ರಮಗಳ ಫಲಗಳು ನಾಗರಿಕರಿಗೂ ಸಿಕ್ಕಿದೆ ಎಂದು ತಿಳಿಸಿದರು.

ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ನೋಡಿಕೊಂಡಿದ್ದಕ್ಕೆ ದೆಹಲಿಯ ಚುನಾವಣಾಧಿಕಾರಿ ತಮಗೆ ದೂರವಾಣಿ ಕರೆ ಮಾಡಿ ಅಭಿಂದನೆ ಹೇಳಿದ್ದಾರೆ. ಯಾವುದೇ ಮತಗಟ್ಟೆಯಲ್ಲಿ ಮರುಚುನಾವಣೆ ಆಗದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿ, ಚುನಾವಣೆ ಶಾಂತಿಯುತವಾಗಿ ನಡೆಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಯ ಉತ್ತಮ ಕಾರ್ಯಕ್ಕೆ ಸಿಕ್ಕ ಅಭಿನಂದನೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಸಹಕಾರದಿಂದ ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.

ನಾನು ರಾಜ್ಯದಲ್ಲಿ 37 ವರ್ಷಗಳ ಕಾಲ ಸೇವೆ ಮಾಡಿದ್ದೇನೆ. ಈ ಅವಧಿಯಲ್ಲಿ ರಾಜ್ಯದ ಜನತೆ ತಮಗೆ ಬಹಳ ಸಹಾಯ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಲು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀಡಿದ ಸಹಕಾರ ಮರೆಯುವಂತಿಲ್ಲ. ಅಂತೆಯೇ ಕುಟುಂಬದ ಪಾತ್ರವೂ ಬಹಳವಿದ್ದು, ಅವರಿಗೂ ಧನ್ಯವಾದ ತಿಳಿಸುತ್ತೇನೆ. ಈಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಡಾ.ಅಲೋಕ್ ಮೋಹನ್ ಅವರಿಗೂ ನನಗೆ ನೀಡಿದಷ್ಟೇ ಸಹಕಾರ ನೀಡುತ್ತೀರಿ ಎಂಬ ವಿಶ್ವಾಸವಿದೆ. ಅವರು ಸಹ ಉತ್ತಮ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಹೆಚ್ಚುವರಿ ಹೊಣೆ ಹೊತ್ತಿರುವ ಡಾ.ಅಲೋಕ್ ಮೋಹನ್, ಎಡಿಜಪಿ ಸೀಮಂತ್‌ಕುಮಾರ್ ಸಿಂಗ್ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.