ರೇಬೀಸ್ ರೋಗಲಕ್ಷಣಗಳು ಒಮ್ಮೆ ಕಾಣಿಸಿಕೊಂಡರೆ ಬದುಕುವುದು ಅಸಾಧ್ಯ?
ರೇಬೀಸ್ ಪೀಡಿತ ನಾಯಿ, ಬೆಕ್ಕು ಅಥವಾ ಮಂಗಗಳು ಕಚ್ಚಿದರೆ ದೊಡ್ಡ ಆಪತ್ತು
ರೇಬೀಸ್ ಸೋಂಕಿತರಿಗೆ ನೀರನ್ನು ಕಂಡರೆ ಉಂಟಾಗುತ್ತೆ ಎಲ್ಲಿಲ್ಲದ ಭಯ
Dog bite: ರೇಬೀಸ್ ಬಗ್ಗೆ ಆಗಾಗ ಎಚ್ಚರಿಕೆ ಕೊಡೋದನ್ನು ನೀವೆಲ್ಲಾ ನೋಡಿಯೇ ಇರುತ್ತಿರಾ. ರೇಬೀಸ್ ಅನ್ನೋದು ವೈರಸ್‌ನಿಂದ ಹರಡುವ ಒಂದು ಭಯಾನಕ ಕಾಯಿಲೆ. ಒಮ್ಮೆ ಇದರ ಲಕ್ಷಣಗಳು ಕಾಣಿಸಿಕೊಂಡ್ರೆ ವಾಸಿ ಮಾಡೋದು ಕಷ್ಟ, ಪ್ರಾಣಕ್ಕೇ ಅಪಾಯವಾಗುತ್ತೆ. ಆದ್ರೆ, ನಾಯಿ ಅಥವಾ ಬೇರೆ ಪ್ರಾಣಿ ಕಚ್ಚಿದ ತಕ್ಷಣ ಎಚ್ಚೆತ್ತುಕೊಂಡು ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಿಕೊಂಡ್ರೆ ರೇಬೀಸ್ ಬರದ ಹಾಗೆ ಪೂರ್ತಿಯಾಗಿ ತಡೆಯಬಹುದು.
ರೇಬೀಸ್ ಸೋಂಕು ತಗುಲಿರುವ ನಾಯಿ, ಬೆಕ್ಕು, ಮಂಗ ಅಥವಾ ನರಿಗಳು ಕಚ್ಚಿದಾಗ ಹಾಗೂ ಪರಚಿದಾಗ ಆ ವೈರಸ್ ಮನುಷ್ಯರ ದೇಹದೊಳಗೆ ಸೇರಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ರೋಗವಿರುವ ಪ್ರಾಣಿಯ ಜೊಲ್ಲು ನಮ್ಮ ಮೈಮೇಲಿರುವ ತೆರೆದ ಗಾಯಕ್ಕೆ, ಇಲ್ಲವೇ ಕಣ್ಣು, ಬಾಯಿ ಅಥವಾ ಮೂಗಿನ ಒಳಭಾಗಕ್ಕೆ ತಗುಲಿದರೂ ಈ ಸೋಂಕು ಬಹಳ ಸುಲಭವಾಗಿ ಹರಡಬಹುದು.
ಪ್ರಾಣಿ ಕಚ್ಚಿದ ತಕ್ಷಣವೇ ಲಕ್ಷಣಗಳು ಕಾಣಿಸುವುದಿಲ್ಲ. ವಾರಗಳು ಅಥವಾ ತಿಂಗಳುಗಳ ನಂತರ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ಜ್ವರ ಮತ್ತು ತಲೆನೋವು. ನಾಯಿ ಕಚ್ಚಿದ ಜಾಗದಲ್ಲಿ ವಿಪರೀತ ತುರಿಕೆ, ಉರಿ ಅಥವಾ ಮರಗಟ್ಟುವಿಕೆ. ಹೈಡ್ರೋಫೋಬಿಯಾ (Hydrophobia). ನೀರನ್ನು ಕಂಡರೆ ತೀವ್ರ ಭಯವಾಗುವುದು ಮತ್ತು ನೀರು ಕುಡಿಯಲು ಕಷ್ಟವಾಗುವುದು. ಅತಿಯಾಗಿ ಜೊಲ್ಲು ಸುರಿಯುವುದು ಮತ್ತು ಭ್ರಮೆ ಅಥವಾ ಗೊಂದಲದ ವಾತಾವರಣ ಉಂಟಾಗುವುದು.
ಬ್ಯಾಕ್ಟೀರಿಯಾ ಇನ್ಫೆಕ್ಷನ್: ನಾಯಿಯ ಹಲ್ಲಿನಲ್ಲಿರೋ ಬ್ಯಾಕ್ಟೀರಿಯಾಗಳಿಂದ ಗಾಯದ ಸುತ್ತ ಸೋಂಕು ಹರಡಿ, ಊತ ಹಾಗೂ ತೀವ್ರ ನೋವು ಕಾಣಿಸಿಕೊಳ್ಳಬಹುದು.
ಟೆಟಾನಸ್ (ಧನುರ್ವಾಯು): ನಾಯಿ ಕಚ್ಚಿದ ಗಾಯದ ಮೂಲಕ ಧನುರ್ವಾಯು ಬ್ಯಾಕ್ಟೀರಿಯಾಗಳು ದೇಹ ಸೇರಿಕೊಳ್ಳುವ ಅಪಾಯವಿರುತ್ತದೆ.
ನಾಯಿ ಅಥವಾ ಯಾವುದೇ ಪ್ರಾಣಿ ಕಚ್ಚಿದರೆ ತಕ್ಷಣವೇ ಈ ಎರಡು ಪ್ರಮುಖ ಕೆಲಸಗಳನ್ನು ಮಾಡಬೇಕು. ಕಚ್ಚಿದ ತಕ್ಷಣ ಗಾಯದ ಭಾಗವನ್ನು ನಲ್ಲಿಯ ಹರಿಯುವ ನೀರಿನಲ್ಲಿ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಸೋಪು ಬಳಸಿ ಚೆನ್ನಾಗಿ ತೊಳೆಯಬೇಕು. ಹೀಗೆ ಮಾಡುವುದರಿಂದ ಗಾಯದಲ್ಲಿರುವ ವೈರಸ್‌ನ ತೀವ್ರತೆ ಬಹಳಷ್ಟು ಕಡಿಮೆಯಾಗುತ್ತದೆ.
ತಡ ಮಾಡದೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ. ಮುಖ್ಯವಾಗಿ, ನಾಯಿ ಕಚ್ಚಿದ ಗಾಯಕ್ಕೆ ನೇರವಾಗಿ ಬ್ಯಾಂಡೇಜ್ ಕಟ್ಟುವುದು ಅಥವಾ ಹೊಲಿಗೆ (ಸ್ಟಿಚ್) ಹಾಕುವುದು ಸೂಕ್ತವಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.
ವೈದ್ಯರು ಹೇಳಿದ ದಿನಗಳಲ್ಲೇ ತಪ್ಪದೇ ಆಂಟಿ-ರೇಬೀಸ್ ಲಸಿಕೆ ಹಾಗೂ ಗಾಯದ ತೀವ್ರತೆ ನೋಡಿಕೊಂಡು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ (RIG) ಇಂಜೆಕ್ಷನ್ ತಗೋಬೇಕು.
ಯಾವುದೇ ಪ್ರಾಣಿ ಕಚ್ಚಿದರೂ ನಿರ್ಲಕ್ಷ್ಯಮಾಡದೆ ತಕ್ಷಣ ಡಾಕ್ಟರ್ ಹತ್ತಿರ ಹೋಗಿ ಚಿಕಿತ್ಸೆ ಪಡೆಯಿರಿ. ಹಾಗೇ ನಿಮ್ಮ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವುಗಳಿಗೂ ಸಮಯಕ್ಕೆ ಸರಿಯಾಗಿ ರೇಬೀಸ್ ಲಸಿಕೆ ಹಾಕಿಸೋದನ್ನ ಮರೀಬೇಡಿ.