ನವದೆಹಲಿ: ಚೀನಾ ಪರ ನಿಲುವು ತಾಳುತ್ತ ಕಮ್ಯುನಿಸ್ಟ್ ರಾಷ್ಟ್ರವೆಂಬಂತೆ ವರ್ತಿಸುತ್ತಿರುವ ನೇಪಾಳದಲ್ಲಿ ಹಾಗೂ ನೇಪಾಳದ ರಾಜಕೀಯದಲ್ಲಿ ಭಾರತೀಯ ಸಂಜಾತರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ನೂತನವಾಗಿ ರಚಿಸಲಾದ ಮಾದೇಶಿ ( ಬಹುತೇಕ ಭಾರತೀಯ ಸಂಜಾತರು ಈ ಗುಂಪಿಗೆ ಸೇರುತ್ತಾರೆ) ರಾಜಕೀಯ ಪಕ್ಷ ಜನತಾ ಸಮಾಜವಾದಿ ಪಾರ್ಟಿ ಆಫ್ ನೇಪಾಳಕ್ಕೆ ಚುನಾವಣಾ ಆಯೋಗವು ಮಾನ್ಯತೆ ನೀಡಿದೆ.
ಕಳೆದ ಏಪ್ರಿಲ್ 23ರಂದು ಸಮಾಜವಾದಿ ಪಾರ್ಟ್ ಆಫ್ ನೇಪಾಳ್ ಹಾಗೂ ರಾಷ್ಟ್ರೀಯ ಜನತಾ ಪಾರ್ಟಿ ವಿಲೀನಗೊಳಿಸಿ ಹೊಸ ಪಕ್ಷ ರಚಿಸಲಾಗಿದೆ. ಜೂನ್ ಏಳರಂದೇ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಗೆ ಪೂರ್ಣಗೊಳ್ಳದಿರಲು ಪ್ರಧಾನಿ ಕೆ.ಪಿ. ಶರ್ಮ ಓಲಿ ಇದಕ್ಕೆ ಅಡ್ಡಗಾಲು ಹಾಕಿದ್ದರೆಂದು ಆರೋಪಿಸಲಾಗಿದೆ.
ಒಟ್ಟು 32 ಸದಸ್ಯ ಬಲದೊಂದಿಗೆ ನೇಪಾಳದಲ್ಲಿ ಮೂರನೇ ಅತಿ ದೊಡ್ಡ ಪಕ್ಷವೆಂಬ ಹೆಗ್ಗಳಿಕೆ ಇದರದ್ದಾಗಿದೆ. ನೇಪಾಳ ಕಮ್ಯುನಿಸ್ಟ್ ಪಾರ್ಟಿ (ಎನ್ಸಿಪಿ) 173 ಸ್ಥಾನದೊಂದಿಗೆ ಅಧಿಕಾರದಲ್ಲಿದ್ದರೆ, ವಿರೋಧ ಪಕ್ಷವಾಗಿರುವ ನೇಪಾಳ ಕಾಂಗ್ರೆಸ್ 60 ಸ್ಥಾನಗಳಲ್ಲಿ ಜಯಗಳಿಸಿದೆ.
ಪ್ರಧಾನಿ ಓಲಿಯನ್ನು ಕೆಳಗಿಳಿಸುವ ಪ್ರಯತ್ನಗಳು ಎನ್ಸಿಪಿಯಲ್ಲಿ ಮುಂದುವರಿದಿರುವಂತೆಯೇ, ಮತ್ತೊಂದು ರಾಜಕೀಯ ಶಕ್ತಿ ಉದಯವಾಗಿದೆ. ಇದರಿಂದಾಗಿ ನೇಪಾಳದ ಚೀನಾ ಪರ ಒಲವು ಕಡಿಮೆಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.
ನೇಪಾಳದ ಪೌರತ್ವ ಕಾಯ್ದೆ ತಿದ್ದುಪಡಿಗೆ ಮಾದೇಶಿಗಳು ಭಾರಿ ವಿರೋದ ವ್ಯಕ್ತಪಡಿಸಿ ದೇಶಾದ್ಯಂತ ಹಲವು ದಿನಗಳವರೆಗೆ ಪ್ರತಿಭಟನೆ ನಡೆಸಿದ್ದರು.