ಭಾರತದ ಪರ ದನಿ ಎತ್ತಿದ ಸಂಸದೆಯ ಲೋಕಸಭಾ ಸದಸ್ಯತ್ವವನ್ನೇ ಕಸಿದ ನೇಪಾಳ...!

Sarita giri- Nepal MP
Published on

ಕಾಠ್ಮಂಡು: ಚೀನಾ ಕೈಗೊಂಬೆಯಾಗಿ ಕುಣಿಯುತ್ತಿರುವ ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಓಲಿಗೆ ಭಾರತ ವಿರೋಧಿ ನಿಲುವೇ ಸದ್ಯ ತಿರುಗುಬಾಣವಾಗಿ ಪರಿಣಮಿಸಿದೆ.

ಯಾವುದೇ ಕ್ಷಣದಲ್ಲಿ ಪ್ರಧಾನಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಓಲಿ ಅಧಿಕಾರ ಉಳಿಸಿಕೊಳ್ಳಲು ಪಕ್ಷವನ್ನೇ ವಿಭಜಿಸುವ ಹುನ್ನಾರ ನಡೆಸಿದ್ದಾರೆ.

ಆದರೆ, ನೇಪಾಳ ಸಂಸತ್ತಿನಲ್ಲಿ ಭಾರತದ ಪರ ದನಿ ಮೊಳಗಿಸಿ ಸಂಚಲನ ಸೃಷ್ಟಿಸಿದ್ದ ಸಂಸದೆ ಸರಿತಾ ಗಿರಿ ಲೋಕಸಭಾ ಸದಸ್ಯತ್ವವನ್ನೇ ಕಳೆದುಕೊಳ್ಳುವಂತಾಗಿದೆ.

ಭಾರತದ ಮೂರು ಪ್ರದೇಶಗಳನ್ನು ತನ್ನದೆಂದು ಬಿಂಬಿಸಿ ಕಳೆದ ಜೂನ್​ 18ರಂದು ನೇಪಾಳದ ಹೊಸ ಭೌಗೋಳಿಕ ನಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿ ಪ್ರಧಾನಿ ಓಲಿ ಅನುಮೋದನೆ ಪಡೆದಿದ್ದರು. ಇದನ್ನು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಿದ್ದರು. ಆದರೆ, ಜನತಾ ಸಮಾಜವಾದಿ ಪಕ್ಷದ ಸಂಸದೆ ಸರಿತಾ ಗಿರಿ ವಿರೋಧಿಸಿದ್ದರು.

ಹೊಸ ಪ್ರದೇಶಗಳಾದ ಲಿಪ್ಮಿಯಾಧುರ, ಲಿಪುಲೇಖ್​ ಹಾಗೂ ಕಾಲಾಪಾನಿ ಜಾಗಗಳು ನಮ್ಮದೆನ್ನಲು ಎಲ್ಲಿವೆ ದಾಖಲೆಗಳು ಎಂದು ಸಂಸತ್ತಿನಲ್ಲಿಯೇ ಸರಿತಾ ಪ್ರಶ್ನಿಸಿದ್ದರು. ಅದನ್ನು ತಿದ್ದುಪಡಿ ಮಾಡಿ ಹಳೆಯ ನಕ್ಷೆಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದ್ದರು. ಮಸೂದೆ ವಿರೋಧವಾಗಿ ಮತ ಚಲಾಯಿಸಿದ್ದರು.

ಈ ತಿದ್ದುಪಡಿ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಬೇಕೆಂದು ಆಕೆಯ ಪಕ್ಷದ ವರಿಷ್ಠರು ಸೂಚಿಸಿದ್ದರು. ಇದಕ್ಕೆ ಸರಿತಾ ಸೊಪ್ಪು ಹಾಕಿರಲಿಲ್ಲ. ಅಂತಿಮವಾಗಿ ಪಕ್ಷದ ವಿಪ್​ ಉಲ್ಲಂಘಿಸಿದ ಆರೋಪದಲ್ಲಿ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net