ನ್ಯೂಸ್

ಚೀನಿಯರ ಅನುಕೂಲಕ್ಕೆ ಗಡಿ ಭಾಗದ ರಸ್ತೆ ಅಭಿವೃದ್ಧಿ, ಬೆನ್ನಿಗೆ ಚೂರಿ ಇರಿಯುತ್ತಿದೆ ನೇಪಾಳ

ನವದೆಹಲಿ: ಇತ್ತೀಚೆಗೆ ನೇಪಾಳದಲ್ಲಿ ಭಾರತ ವಿರೋಧಿ ಮನೋಭಾವ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಭಾರತದ ಹಿತಾಸಕ್ತಿಗೆ ಧಕ್ಕೆ ಒದಗುವ ರೀತಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇತ್ತಿಚೆಗಷ್ಟೇ ಭಾರತದ ಗಡಿ ಭಾಗಗಳನ್ನು ಸೇರ್ಪಡೆಗೊಳಿಸಿಕೊಂಡು ಪರಿಷ್ಕೃತ ನಕ್ಷೆ ರಚಿಸಿ, ಸಂಸತ್​ನ ಅನುಮೋದನೆ ಪಡೆದುಕೊಂಡಿದ್ದ ನೇಪಾಳ ಇದೀಗ ತನ್ನ ಗಡಿಭಾಗದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಈ ಕಾಮಗಾರಿಗಳನ್ನು ನೇಪಾಳ ಬಹುತೇಕ ಚೀನಾದ ಕುಮ್ಮಕ್ಕಿನೊಂದಿಗೆ ಕೈಗೊಳ್ಳುತ್ತಿದ್ದು, ಭಾರತದ ಬೆನ್ನಿಗೆ ಚೂರಿ ಇರಿಯಲು ಹುನ್ನಾರ ನಡೆಸಿದೆ.

ಭಾರತ ಮತ್ತು ನೇಪಾಳದ ಗಡಿಗೆ ಅಂಟಿಕೊಂಡಿರುವ ಭಾರತದ ಪಿತ್ತೋರ್​ಗಢ ಜಿಲ್ಲೆಗೆ ಸಮೀಪದಲ್ಲಿರುವ ಮಹಾಕಾರಿ ಕಾರಿಡಾರ್​ ಎಂದು ಕರೆಯಲಾಗುವ 87 ಕಿ.ಮೀ. ಉದ್ದದ ಡ್ರಾಕುಲಾ-ತಿನ್ಕಾರ್​ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಅದು ಕೈಗೆತ್ತಿಕೊಂಡಿದೆ. ಇದರ ಕಾಮಗಾರಿಯ ಜವಾಬ್ದಾರಿಯನ್ನು ನೇಪಾಳ ಸೇನಾಪಡೆಗೆ ವಹಿಸಲಾಗಿದೆ.

ಈ ರಸ್ತೆಯ ನಿರ್ಮಾಣದಿಂದಾಗಿ ನೇಪಾಳದ ಜನತೆಗೆ ಭಾರತೀಯ ರಸ್ತೆಗಳ ಬಳಕೆಯ ಅವಲಂಬನೆ ದೂರಾಗಲಿದೆ ಎಂಬುದು ನೇಪಾಳದ ವಾದವಾಗಿದೆ. ಆದರೆ, ಈ ರಸ್ತೆಯು ತಿನ್ಕಾರ್​ನಿಂದ ಚೀನಾದ ಗಡಿವರೆಗೂ ವಿಸ್ತರಿಸುತ್ತದೆ. ಇದರಿಂದಾಗಿ ಭಾರತದ ಮೇಲೆ ದಂಡೆತ್ತಿ ಬರಲು ಚೀನಾಕ್ಕೆ ತುಂಬಾ ಅನುಕೂಲವಾಗಲಿದೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ.