ನ್ಯೂಸ್

ರಾಮನ ಅಭಿಷೇಕಕ್ಕೆ ಬಂತು ನೇಪಾಳ ನದಿಗಳ ಜಲ

ವಿಜಯವಾಣಿ ಸುದ್ದಿಜಾಲ, ಅಯೋಧ್ಯೆ

ನೇಪಾಳಕ್ಕೂ ಭಾರತದ ಅಯೋಧ್ಯೆಗೂ ಅವಿನಾಭಾವ ನಂಟು. ಭಗವಾನ್‌ ಶ್ರೀರಾಮನ ಪತ್ನಿ ಸೀತೆ ನೇಪಾಳದ ಜನಕಪುರಿಯಲ್ಲಿ ಜನಿಸಿದಳು ಎಂದು ರಾಮಾಯಣದಲ್ಲೇ ದಾಖಲಾಗಿದೆ. ಹೀಗಾಗಿ, ರಾಮನ ಜನ್ಮಸ್ಥಾನ ಅಯೋಧ್ಯೆ ಮತ್ತು ಸೀತೆಯ ಜನ್ಮಸ್ಥಳ ಜನಕಪುರಿ ಎರಡೂ ದೇಶಗಳನ್ನೂ ಈಗಲೂ ಬೆಸೆದಿದೆ.

ಅಂದರೆ, ರಾಮ-ಸೀತೆಯ ಕಾರಣಕ್ಕಾಗಿ ಎರಡೂ ದೇಶಗಳ ಧಾರ್ಮಿಕ ಸಂಬಂಧ ಈಗಲೂ ಗಟ್ಟಿಯಾಗಿದೆ. ಅಯೋಧ್ಯೆಗೆ ಗಂಡಕಿ ನದಿಯ ಶಿಲೆ ಬಂದಾಗಲೂ ಇದು ಸಾಬೀತಾಗಿತ್ತು. ಈಗ ಮತ್ತೊಮ್ಮೆ ಅದು ದೃಢವಾಗಿದೆ. ಜನವರಿ ೨೨ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾಗಲಿರುವುದರಿಂದ, ನೇಪಾಳದ ೧೬ ನದಿಗಳಿಂದ ಸಂಗ್ರಹಿಸಿದ ನೀರನ್ನು ಅಯೋಧ್ಯೆಗೆ ತರಲಾಗಿದೆ.

ಕಾಳಿ, ಕೋಸಿ, ಗಂಡಕಿ ಸೇರಿ ೧೬ ನದಿಗಳ ನೀರಿನಿಂದ ರಾಮನ ಮೂರ್ತಿ ಅಭಿಷೇಕ ನಡೆಯಲಿದೆ. ನೇಪಾಳದ ಭಕ್ತರು ಖುದ್ದಾಗಿ ತಾವೇ ಕಳಶಗಳಲ್ಲಿ ನೀರನ್ನು ತಂದು ಅಯೋಧ್ಯೆಯ ಕರಸೇವಕಪುರಂನಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಕೇಂದ್ರಸ್ಥಾನದ ಮಂದಿರವೊಂದರಲ್ಲಿ ಇರಿಸಿದ್ದಾರೆ.

ಜನವರಿ ೧೬ನೇ ತಾರೀಖಿನಂದು ರಾಮನ ಪ್ರಾಣಪ್ರತಿಷ್ಠೆಯ ಒಂದೊಂದೇ ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆಯೇ ಈ ನೀರನ್ನು ರಾಮಮಂದಿರಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಲಾಗಿದೆ.