More

    ಕೊಬ್ಬರಿ ಬೆಳೆಗಾರರು ಗಾಬರಿ: ಖರೀದಿ ಪ್ರಕ್ರಿಯೆ ತಾರತಮ್ಯ ತಂದ ಸಂಕಷ್ಟ

    | ಸೋರಲಮಾವು ಶ್ರೀಹರ್ಷ ತುಮಕೂರು

    ತೆಂಗು ಬೆಳೆಗಾರರ ಆದಾಯದ ಪ್ರಮುಖ ಮೂಲವಾಗಿರುವ ಕೊಬ್ಬರಿ ಬೆಲೆ ಕುಸಿತದಿಂದ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬಿದ್ದಿದೆ. ಸಾಕಷ್ಟು ಒತ್ತಡದ ನಂತರ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಉಂಡೆ ಕೊಬ್ಬರಿಗೆ 12 ಸಾವಿರ ರೂ. ಹಾಗೂ ಮಿಲ್ಲಿಂಗ್ ಕೊಬ್ಬರಿಗೆ 11,180ರೂ.ಗೆ ಹೆಚ್ಚಿಸಿ ಅಗತ್ಯವಿರುವ ಕಡೆ ಖರೀದಿಗೆ ನಫೆಡ್ ಹಾಗೂ ಎನ್​ಸಿಸಿಎಫ್​ಗೆ

    ಅನುಮತಿ ನೀಡಿದ್ದರೂ, ಖರೀದಿ ಪ್ರಕ್ರಿಯೆಯಲ್ಲಿ ಸುಧಾರಣೆ ಆಗದಿದ್ದರೆ ಬೆಳೆಗಾರರಿಗೆ ಪ್ರಯೋಜನ ದೊರಕುವುದು ಕನ್ನಡಿಯೊಳಗಿನ ಗಂಟೇ ಸರಿ. ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅಂದಾಜು 17 ಜಿಲ್ಲೆಗಳ ತೆಂಗು ಬೆಳೆಗಾರರು ಹಾಗೂ ಕೃಷಿ ಕಾರ್ವಿುಕರ ಜೀವನಕ್ಕೆ ಕೊಬ್ಬರಿ ಬೆಲೆ ಕುಸಿತ ದೊಡ್ಡ ಪೆಟ್ಟು ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಫೆಡ್ ಮೂಲಕ 62,500 ಟನ್ ಖರೀದಿಗೆ ಮುಂದಾಗಿದೆ. ಆದರೆ, ಉಂಡೆ ಕೊಬ್ಬರಿ ಖರೀದಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಉತ್ಪತ್ತಿಯ ಶೇ.30ರಷ್ಟಿರುವ ಮಿಲ್ಲಿಂಗ್ ಕೊಬ್ಬರಿಯ ಗತಿ ಏನು ಎಂಬ ಪ್ರಶ್ನೆ ಎದ್ದಿದೆ.

    ಖರೀದಿ ಕೇಂದ್ರಗಳಲ್ಲಿ ಪ್ರತಿವರ್ಷ ರೈತರು ಅಧಿಕಾರಿ, ಸಿಬ್ಬಂದಿಯೊಂದಿಗೆ ಕಿತ್ತಾಡುವ ಸಂಕಷ್ಟ ಈ ವರ್ಷವೂ ಮುಂದುವರಿಯುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿಯೂ ಉಂಡೆ ಕೊಬ್ಬರಿ ಜತೆಗೆ ಮಿಲ್ಲಿಂಗ್ ಕೊಬ್ಬರಿ ಖರೀದಿ ಮಾಡಿದರಷ್ಟೇ ರೈತರ ಉಳಿವು ಎಂಬಂತಾಗಿದೆ. ಖರೀದಿಗೆ ಕೊಬ್ಬರಿ ಆಯ್ಕೆಯ ಮಾನದಂಡಗಳೇ ರೈತರ ತಲೆ ನೋವು ಹೆಚ್ಚಿಸಲಿದೆ. 7ಪಿಪಿಎಂ ತೇವಾಂಶದ, 75ಎಂಎಂ ಗಿಂತ ಹೆಚ್ಚು ಗಾತ್ರದ ಕೊಬ್ಬರಿಯನ್ನು ಮಾತ್ರ ನಫೆಡ್ ಖರೀದಿಸಲಿದ್ದು, ಇದಕ್ಕಿಂತ ಚಿಕ್ಕ ಕೊಬ್ಬರಿ ಮಾರಾಟ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಖರೀದಿ ಕೇಂದ್ರ ಆರಂಭಕ್ಕೂ ಮೊದಲು ಗಾತ್ರದಲ್ಲಿ ಚಿಕ್ಕದಾಗಿರುವ, ಸುಕ್ಕಾಗಿರುವ ಕೊಬ್ಬರಿಯನ್ನು ಮಿಲ್ಲಿಂಗ್ ಕೊಬ್ಬರಿ ಎಂದು ಪರಿಗಣಿಸಿ ಕೊಂಡುಕೊಳ್ಳಲು ಜಿಲ್ಲಾಧಿಕಾರಿ, ರಾಜ್ಯ ಸರ್ಕಾರ ಕೇಂದ್ರಕ್ಕೆ ಮನದಟ್ಟು ಮಾಡಬೇಕು ಎಂಬುದು ಬೆಳೆಗಾರರ ಆಗ್ರಹ.

    ಪ್ರಸ್ತುತ ತಿಪಟೂರು ಎಪಿಎಂಸಿಯಲ್ಲಿ ವಾರ್ಷಿಕ 2.11 ಲಕ್ಷ ಟನ್ ಕೊಬ್ಬರಿ ವಹಿವಾಟು ನಡೆಯುತ್ತದೆ. ಇದರಲ್ಲಿ ಶೇ.30ರಷ್ಟು ಕೊಬ್ಬರಿಯೂ ನಫೆಡ್ ನಿರ್ಧರಿಸಿರುವ ಗುಣಮಟ್ಟದಲ್ಲಿ ಬರುವುದಿಲ್ಲ. ರೈತರಿಗೆ ಈ ಶೇ.30ರಷ್ಟು (50 ಸಾವಿರ ಮೆಟ್ರಿಕ್ ಟನ್) ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ದರ ಸಿಗುವುದರಿಂದ ಶೇ.70 ಬೆಂಬಲ ಬೆಲೆಗೆ ಮಾರಾಟ ಮಾಡಿದರೂ ಲಾಭವಿಲ್ಲದಂತಾಗಿದೆ.

    ಕೇರಳ ಹಾಗೂ ತಮಿಳುನಾಡಿನಲ್ಲಿ ಉಂಡೆ ಹಾಗೂ ಮಿಲ್ಲಿಂಗ್ ಕೊಬ್ಬರಿ ಖರೀದಿ ನಡೆಯಲಿದೆ. ಕರ್ನಾಟಕದಲ್ಲಿ ನಫೆಡ್ ಮೂಲಕ ಕೇವಲ ಉಂಡೆ ಕೊಬ್ಬರಿ ಕೊಂಡುಕೊಳ್ಳುತ್ತಿರುವುದು ರೈತರಿಗೆ ಪ್ರತಿವರ್ಷವೂ ದೊಡ್ಡ ನಷ್ಟ ತಂದೊಡ್ಡುತ್ತಿದೆ. ಚಿಕ್ಕಗಾತ್ರದ ಸುಕ್ಕಾಗಿರುವ ಕೊಬ್ಬರಿಯನ್ನು ಮಿಲ್ಲಿಂಗ್ ಕೊಬ್ಬರಿ ಎಂದು ಪರಿಗಣಿಸಿ ಎಂಎಸ್​ಪಿ ಅಡಿ ಖರೀದಿಸಬೇಕು.

    | ನಾಗೇಶ್, ಬೆಲೆಕಾವಲು ಸಮಿತಿ

    * ಉಂಡೆ ಕೊಬ್ಬರಿಗೆ ಗುಣಮಟ್ಟದ ಸಮಸ್ಯೆ

    * ಸಣ್ಣ ಗಾತ್ರದ, ಸುಕ್ಕಾದ ಕೊಬ್ಬರಿಗಿಲ್ಲ ಬೇಡಿಕೆ

    * ಕೇಂದ್ರದ ಮೇಲೆ ಒತ್ತಡ ಹೇರಲು ಆಗ್ರಹ

    * 50 ಲಕ್ಷ ಟನ್​ಗೆ ಸಿಗದ ಎಂಎಸ್​ಪಿ

    ವ್ಯತ್ಯಾಸವೇನು?
    ಕರ್ನಾಟಕದಲ್ಲಿ ಬೆಳೆಯುವ ಅಡುಗೆ ಹಾಗೂ ಅಡುಗೆ ಎಣ್ಣೆಗೆ ಬಳಸುವ ಗುಣಮಟ್ಟದ ಕೊಬ್ಬರಿಯನ್ನು ಉಂಡೆ ಕೊಬ್ಬರಿ ಎನ್ನಲಾಗುತ್ತೆ, ಇದರ ಹೊರತಾದ ಅಷ್ಟೇನು ಗುಣಮಟ್ಟವಲ್ಲದ ಆರೋಗ್ಯ ವರ್ಧಕ ಕೊಬ್ಬರಿ ಎಣ್ಣೆ, ಸೋಪುಗಳಿಗೆ ಬಳಸಲಾಗುವ ಕೊಬ್ಬರಿಯನ್ನು ಮಿಲ್ಲಿಂಗ್ ಕೊಬ್ಬರಿ ಎಂದು ನಿರ್ಧರಿಸಲಾಗಿದ್ದು ಕೇರಳ ಹಾಗೂ ತಮಿಳುನಾಡಿನಲ್ಲಿ ಇದನ್ನು ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದಿಸಲಾಗುತ್ತಿರುವ ಶೇ.30 ಕೊಬ್ಬರಿ ಉಂಡೆ ಈ ಮಾನದಂಡದಲ್ಲಿ ಬರುತ್ತಿಲ್ಲ. ಇದನ್ನು ಮಾರಾಟ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಉತ್ಪಾದನಾ ವೆಚ್ಚ ಹಾಗೂ ಕೊಬ್ಬರಿಯ ಗುಣಮಟ್ಟ ನಿಗದಿಪಡಿಸುವ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಸಿಎಸಿಪಿ) ಕರ್ನಾಟಕದಲ್ಲಿ ಉಂಡೆ ಕೊಬ್ಬರಿ ಉತ್ಪಾದಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಇಲಾಖೆಗೆ ಶಿಫಾರಸು ಮಾಡಿ ಕೈತೊಳೆದುಕೊಂಡಿರುವುದು ಈ ಸಮಸ್ಯೆಗೆ ಕಾರಣ.

    ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಆಗ್ರಹ
    ಕೇಂದ್ರ ಸರ್ಕಾರ ಮಿಲ್ಲಿಂಗ್ ಕೊಬ್ಬರಿಗೆ 11,180ರೂ. ಕನಿಷ್ಠ ಬೆಂಬಲ ಬೆಲೆ ಘೊಷಿಸಿದೆಯಾದರೂ ಕರ್ನಾಟಕದಲ್ಲಿ ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಅನುಮತಿ ನೀಡಿಲ್ಲ. ಹೀಗಾಗಿ, 75ಎಂಎಂಗಿಂತ ಸಣ್ಣ ಗಾತ್ರದ ಹಾಗೂ ಸುಕ್ಕು ಬಂದಿರುವ ಕೊಬ್ಬರಿ ಅನಾಥವಾಗಿದೆ. ಕರ್ನಾಟಕದಲ್ಲಿ ಉಂಡೆ ಕೊಬ್ಬರಿಗೆ ಕ್ವಿಂಟಾಲ್​ಗೆ 12 ಸಾವಿರ ರೂ. ನೀಡಿ ಖರೀದಿಸುವ ನಫೆಡ್ ಮೂಲಕವೇ ಮಿಲ್ಲಿಂಗ್ ಕೊಬ್ಬರಿಯನ್ನೂ ಖರೀದಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಕೃಷಿ ಇಲಾಖೆ ಜತೆ ಸಂವಹನ ನಡೆಸಬೇಕಿದೆ. ಮಾರಾಟ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸ್ಥಳೀಯ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿ ಕೇರಳ ಹಾಗೂ ತಮಿಳುನಾಡಿನಂತೆ ರಾಜ್ಯದಲ್ಲಿಯೂ ಉಂಡೆ ಹಾಗೂ ಮಿಲ್ಲಿಂಗ್ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿಯೂ ಕೊಂಡುಕೊಳ್ಳುವಂತೆ ಒತ್ತಾಯಿಸುವ ಅಗತ್ಯವಿದೆ.

    15 ಸಾವಿರ ಕೊಟ್ರೆ 1 ಗಂಟೆಗೆ 55 ಸಾವಿರ ರೂ.!? ರೀಲ್ಸ್​ ಸ್ಟಾರ್​ ಅಮಲಾಳ ಹಗರಣ ಬಯಲು, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts