ನ್ಯೂಸ್

ನೀಟ್​​​ ವಿವಾದ; ಪ್ರಶ್ನೆಪತ್ರಿಕೆ ಕದ್ದವರನ್ನು ಬಂಧಿಸಿದ ಸಿಬಿಐ

ಪಾಟ್ನಾ: ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಸಿಬಿಐ ಬಂಧಿಸಿದೆ. ಬಿಹಾರದ ಹಜಾರಿಬಾಗ್‌ನಲ್ಲಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ ನೀಟ್​ ಯುಜಿ ಪೇಪರ್ ಸೋರಿಕೆಯಾಗುವ ಮುನ್ನ ಪ್ರಶ್ನೆಪತ್ರಿಕೆ ಕದ್ದಿದ್ದವರನ್ನು ಸಿಬಿಐ ಮಂಗಳವಾರ (ಜುಲೈ 16) ಬಂಧಿಸಿದೆ. ಬಂಧಿತರನ್ನು ಪಾಟ್ನಾದ ಪಂಕಜ್ ಕುಮಾರ್ ಮತ್ತು ಹಜಾರಿಬಾಗ್‌ನ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಕದ್ದು ಮಾರಾಟ ಮಾಡುವಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು ಎನ್ನಲಾಗಿದೆ.

ಆರೋಪಿ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಮ್‌ಶೆಡ್‌ಪುರದಲ್ಲಿ 2017ರ ಬ್ಯಾಚ್ ಸಿವಿಲ್ ಇಂಜಿನಿಯರ್ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಸಿಬಿಐ ಪ್ರಮುಖ ಆರೋಪಿ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಬಿಹಾರದ ನಳಂದಾದಲ್ಲಿ ಬಂಧಿಸಿತ್ತು. ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ರಾಕೇಶ್ ರಂಜನ್ ಪ್ರಮುಖರು ಎಂದು ನಂಬಲಾಗಿದೆ. ರಂಜನ್​​ನನ್ನು ಬಂಧಿಸಲು ಸಿಬಿಐ ಪಾಟ್ನಾ ಮತ್ತು ಕೋಲ್ಕತ್ತಾದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿತು. ಐಪಿ ವಿಳಾಸಗಳು ಮತ್ತು ಇಮೇಲ್ ಸಂವಹನಗಳು ಸೇರಿದಂತೆ ಡಿಜಿಟಲ್​​​ ಮಾಹಿತಿಗಳ ವಿವರವಾದ ವಿಶ್ಲೇಷಣೆಯ ಮೂಲಕ ರಂಜನ್​​​ನನ್ನು ಪತ್ತೆಹಚ್ಚಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.

ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಹಲವು ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಿಕೊಂಡ ಬಳಿಕ ಇದುವರೆಗೆ ಸುಮಾರು 60 ಮಂದಿಯನ್ನು ಬಂಧಿಸಿದೆ. 2024 ಮೇ 5ರಂದು ವಿದೇಶದಲ್ಲಿ 14 ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆ ಮುಗಿದ ಕೂಡಲೇ ಅದರ ಪೇಪರ್ ಸೋರಿಕೆಯಾಗಿದೆ ಎಂಬ ಆರೋಪ ಶುರುವಾಗಿದೆ. ಮೇ 6ರಂದು, ಪೇಪರ್ ಸೋರಿಕೆಯ ಶಂಕೆಯ ಮೇಲೆ ಪಾಟ್ನಾ ಪೊಲೀಸರು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕೇಂದ್ರೀಯ ಏಜೆನ್ಸಿಗಳ ಮಾಹಿತಿಯ ಮೇರೆಗೆ ಪಾಟ್ನಾ ಪೊಲೀಸರು ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.(ಏಜೆನ್ಸೀಸ್​​)