ನ್ಯೂಸ್

ನೀಟ್​ ಪೇಪರ್​ ಲೀಕ್​ ಸ್ಕ್ಯಾಮ್​; ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಿದ ಸಿಬಿಐ

ಪಾಟ್ನಾ: ನೀಟ್ ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ(ಜುಲೈ 18) ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಂಧಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಎಲ್ಲಾ ನಾಲ್ವರು ವಿದ್ಯಾರ್ಥಿಗಳನ್ನು ಬಿಹಾರದ ರಾಜಧಾನಿ ಪಾಟ್ನಾದಿಂದ ಬಂಧಿಸಲಾಗಿದೆ. ಈ ನಾಲ್ವರು ಪಾಟ್ನಾದ ಏಮ್ಸ್‌ನಲ್ಲಿ ಓದುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ಸಿಬಿಐ ಹೇಳಿದೆ.

ನಾಲ್ವರಲ್ಲಿ ಚಂದನ್ ಸಿಂಗ್, ರಾಹುಲ್ ಅನಂತ್ ಮತ್ತು ಕುಮಾರ್ ಶಾನು ಈ ಮೂವರು ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ನಾಲ್ಕನೇ ಆರೋಪಿ ಕರಣ್ ಜೈನ್ ಎರಡನೇ ವರ್ಷದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಏಮ್ಸ್ ಅಧ್ಯಾಪಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಕೊಠಡಿಗಳಿಂದ ಹೊರಗೆ ಕರೆದೊಯ್ಯಲಾಯಿತು. ವಿಚಾರಣೆ ಬಳಿಕ ತನಿಖೆಗೆ ವಿದ್ಯಾರ್ಥಿಗಳ ಅಗತ್ಯವಿದೆ ಎಂದು ಅವರನ್ನು ಬಂಧಿಸಲಾಗಿದೆ. ಅವರ ಹಾಸ್ಟೆಲ್ ಕೊಠಡಿಗಳನ್ನು ಸೀಲ್ ಮಾಡಲಾಗಿದೆ. ಪಾಟ್ನಾದ ಏಮ್ಸ್‌ನ ಹಿರಿಯ ಆಡಳಿತ ಮಂಡಳಿಯ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ವೈದ್ಯರನ್ನು ಬಂಧಿಸಲಾಗಿಲ್ಲ, ಆದರೆ ಲಭ್ಯವಿರುವ ಮಾಹಿತಿಯ ಪ್ರಕಾರ, ಸಿಬಿಐ ತಂಡವು ನಾಲ್ವರು ವಿದ್ಯಾರ್ಥಿಗಳನ್ನು ಕರೆದೊಯ್ದಿದೆ. ಈ ವಿದ್ಯಾರ್ಥಿಗಳಲ್ಲಿ ಒಬ್ಬರು ಹಾಸ್ಟೆಲ್‌ನಲ್ಲಿ ಇರಲಿಲ್ಲ. ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಸಹಾಯ ಮತ್ತು ಸಹಕಾರವನ್ನು ಒದಗಿಸಲಾಗಿದೆ ಎಂದು ಪಾಟ್ನಾ ಎಐಐಎಂಎಸ್ ನಿರ್ದೇಶಕ ಜಿಕೆ ಪಾಲ್ ಹೇಳಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ 6 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.(ಏಜೆನ್ಸೀಸ್​​)