ನ್ಯೂಸ್

ನಯನತಾರಾ ಸಾಕ್ಷ್ಯಚಿತ್ರಕ್ಕೆ ಮತ್ತೇ ಸಂಕಷ್ಟ! ಅಪ್ಪಣೆಯಿಲ್ಲದೆ ಬಳಸಿಕೊಳ್ಳುವುದು ಅಕ್ಷಮ್ಯ; ಚಿತ್ರತಂಡ ಕಿಡಿ | Nayanthara

ಮೋಹನ್​ ಶೆಟ್ಟಿ

Nayanthara: ಬಹುಭಾಷಾ ನಟಿ ನಯನತಾರಾ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಬಿಯಾಂಡ್ ದಿ ಫೇರಿ ಟೇಲ್ ಸಾಕ್ಷ್ಯಚಿತ್ರಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಈ ಬಾರಿ ಕಾನೂನು ತೊಂದರೆಗಾಗಿ ಸಿನಿಮಾ ಮತ್ತೊಮ್ಮೆ ಸುದ್ದಿಯಾಗಿದೆ. ಇದಕ್ಕೆ ಕಾರಣ, ಈ ಹಿಂದೆಯೇ ಬಿಡುಗಡೆಗೊಂಡು ಸೂಪರ್​ಹಿಟ್​ ಆಗಿರುವ ಚಿತ್ರವೊಂದರ ತೆರೆಮರೆಯ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಹೈಕೋರ್ಟ್​ ಮೆಟ್ಟಿಲೇರಿದೆ.

ಸೂಪರ್​ಸ್ಟಾರ್​ ರಜನಿಕಾಂತ್ ಅಭಿನಯದ 2005ರಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಹಿಟ್​ ಆಗಿದ್ದ 'ಚಂದ್ರಮುಖಿ' ಚಿತ್ರವನ್ನು ನಿರ್ಮಿಸಿದ ಎಪಿ ಇಂಟರ್ನ್ಯಾಷನಲ್, ನಯನತಾರಾ ಚಿತ್ರ ಹಕ್ಕುಸ್ವಾಮ್ಯ ನಿಯಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ಗೆ ಸಲ್ಲಿಸಿತು. ಅಂತೆಯೇ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ನೆಟ್‌ಫ್ಲಿಕ್ಸ್ ಮತ್ತು ಟಾರ್ಕ್ ಸ್ಟುಡಿಯೋಗಳಿಗೆ ನೋಟಿಸ್ ಜಾರಿಗೊಳಿಸಿದೆ ಎಂದು '123 ತೆಲುಗು' ಸಿನಿ ವರದಿ ಉಲ್ಲೇಖಿಸಿದೆ.

ಕಾನೂನು ಎಚ್ಚರಿಕೆ ಜೊತೆಗೆ 5 ಕೋಟಿ ರೂ. ಪರಿಹಾರದ ಬೇಡಿಕೆಯ ಹೊರತಾಗಿಯೂ, ನಯನತಾರಾ ಸಾಕ್ಷ್ಯಚಿತ್ರವು 2005ರ ರಜನಿಕಾಂತ್ ಅಭಿನಯದ ಚಿತ್ರದ ತೆರೆಮರೆಯ ದೃಶ್ಯಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ನ್ಯಾಯಾಲಯವು ನೋಟಿಸ್​ ನೀಡಿರುವ ಪಾರ್ಟಿಗಳಿಗೆ ಈ ವಿಚಾರಕ್ಕೆ ಪ್ರತಿಕ್ರಿಯಿಸಲು ಮುಂದಿನ ಎರಡು ವಾರಗಳ ಕಾಲಾವಕಾಶ ನೀಡಿದೆ.

ಇದು 2ನೇ ಬಾರಿ!

ನಯನತಾರಾ ಅಭಿನಯಿಸುತ್ತಿರುವ ನೆಟ್​ಫ್ಲಿಕ್ಸ್​ ಸಾಕ್ಷ್ಯಚಿತ್ರಕ್ಕೆ ಎದುರಾಗುತ್ತಿರುವ ಕಾನೂನು ಸಂಕಷ್ಟ ಇದೇ ಮೊದಲಲ್ಲ. ಅಸಲಿಗೆ ಇದು ಎರಡನೇ ಬಾರಿಗೆ. ಈ ಹಿಂದೆ ತಮಿಳು ನಟ ಧನುಷ್ ಅವರ 2015ರಲ್ಲಿ ತೆರೆಕಂಡ 'ನಾನುಮ್ ರೌಡಿ ಧಾನ್'ನ ಚಿತ್ರದ ಮೂರು ಸೆಕೆಂಡುಗಳ ಕ್ಲಿಪ್ ಅನ್ನು ಎನ್​ಓಸಿ ಪ್ರಮಾಣ ಪತ್ರ ಪಡೆಯದೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ, ವುಂಡರ್‌ಬಾರ್ ಫಿಲ್ಮ್ಸ್ ಕೋರ್ಟ್​ ಮೆಟ್ಟಿಲೇರಿತ್ತು. ಆ ಅರ್ಜಿಯಲ್ಲಿ ನಯನತಾರಾ, ವಿಘ್ನೇಶ್ ಶಿವನ್ ಮತ್ತು ಅವರ ಕಂಪನಿ ರೌಡಿ ಪಿಕ್ಚರ್ಸ್ ವಿರುದ್ಧ 10 ಕೋಟಿ ರೂ.ಗಳ ಪರಿಹಾರ ಕೋರಲಾಗಿತ್ತು.

ಎರಡು ಪ್ರತ್ಯೇಕ ಚಿತ್ರಗಳ ಹಕ್ಕುಸ್ವಾಮ್ಯ ವಿವಾದಗಳು ನಟಿಯ ಸಾಕ್ಷ್ಯಚಿತ್ರದ ವಿರುದ್ಧ ಕೇಳಿಬಂದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್).