ನ್ಯೂಸ್

ದಾಸವಾಳ ಚಹಾ ರೋಗಕ್ಕೆ ಮದ್ದು!; ವೈದ್ಯರ ಟೀಕೆ ಬೆನ್ನಲ್ಲೇ ಪೋಸ್ಟ್​​ ಡಿಲೀಟ್ ಮಾಡಿದ ನಯನತಾರಾ!

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟಿ ನಯನತಾರಾ ಬಾಲಿವುಡ್​​ನಲ್ಲಿ ಜವಾನ್ ಚಿತ್ರದ​ ಬಳಿಕ ಸೌತ್​​ನಲ್ಲಿ ಇರೈವನ್​ ಮತ್ತು ಅನ್ನಪೂರ್ಣಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಜತೆಗೆ ಸಾಮಾಜಿಕ ಜಾಲತಾಣದಲ್ಲು ಆ್ಯಕ್ಟೀವ್​ ಆಗಿರುವ ನಟಿ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ದಾಸವಾಳ ಚಹಾದ ಪ್ರಯೋಜನಗಳನ್ನು ಕುರಿತು ಪೋಸ್ಟ್​ ಮಾಡಿದ್ದರು.

ಇದು ನನ್ನ ನೆಚ್ಚಿನ ಚಹಾ ಮತ್ತು ಮುನ್ಮುನ್ ಗನೇರಿವಾಲ್ ಸಿದ್ಧಪಡಿಸಿದ ಆಹಾರಗಳಲ್ಲಿ ಇದು ಅತ್ಯಂತ ರೋಮಾಂಚನಕಾರಿ. ಇದನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಚಹಾದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳಿವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಸಹಕಾರಿ. ಇದು ತುಂಬಾ ತಂಪಾಗಿರುತ್ತದೆ. ಆದ್ದರಿಂದ ತ್ವಚೆಯ ಮೇಲೆ ಹುಣ್ಣು ಮುಂತಾದ ಸಮಸ್ಯೆಗಳಿರುವವರಿಗೆ ಈ ಚಹಾ ಒಳ್ಳೆಯದು. ಈ ಟೀಯಲ್ಲಿ ಸಾಕಷ್ಟು ವಿಟಮಿನ್​​ಗಳಿವೆ ಎಂದು ನಯನತಾರಾ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದರು.

ಲೇಡಿ ಸೂಪರ್​ಸ್ಟಾರ್​ ನಯನತಾರಾ ಮಾಡಿದ್ದ ಪೋಸ್ಟ್​ಗೆ ಸಾಮಾಜಿಕ ಜಾಲತಾಣದಲ್ಲಿ ಲಿವರ್ ಡಾಕ್ ಎಂದು ಕರೆಯಲ್ಪಡುವ ಅಬ್ಬಿ ಫಿಲಿಪ್ಸ್, ಲಕ್ಷಾಂತರ ಅಭಿಮಾನಿಗಳನ್ನು ನಯನತಾರಾ ದಾರಿತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದರು. ದಾಸವಾಳದ ಚಹಾವನ್ನು ಟೇಸ್ಟಿ ಎಂದು ಹೇಳಿ ನಿಲ್ಲಿಸಿದ್ದರೆ ಸರಿಹೋಗುತಿತ್ತು. ಆದರೆ ಅವರು ಇನ್ನು ಮುಂದೆ ಹೋಗಿ ಮಧುಮೇಹ, ಅಧಿಕ ರಕ್ತದೊತ್ತಡ, ಮೊಡವೆ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಜ್ವರದಿಂದ ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಇದು ಎಲ್ಲಿಯೂ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.

ದಾಸವಾಳ ಚಹಾದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ವಯಸ್ಕ ಪುರುಷರು ಮತ್ತು ಮಹಿಳೆಯರು ಇದನ್ನು ನಿಯಮಿತವಾಗಿ ಬಳಸುವುದನ್ನು ನಿಷೇಧಿಸಲಾಗಿದೆ. ಸುರಕ್ಷಿತವಾಗಿರುವುದು ಉತ್ತಮ ಎಂದು ಸ್ಪಷ್ಟವಾಗಿ ಅವರು ವಿವರಿಸಿದ್ದಾರೆ. ಅಲ್ಲದೆ ಅವರು ನಯನತಾರಾ ಅವರನ್ನು ಡಾಕ್ಟರ್​ ನಯನತಾರಾ ಅವರು ಹೇಳಿರುವುದೆಲ್ಲ ಸುಳ್ಳು ಎಂದು ಗೇಲಿ ಮಾಡಿದ್ದಾರೆ.

ದಿ ಲಿವರ್ ಡಾಕ್​ ಅವರ ಟೀಕೆಗಳ ನಂತರ ನಯನತಾರಾ ತಮ್ಮ ಪೋಸ್ಟ್​​ ಅನ್ನು ಡಿಲೀಟ್​ ಮಾಡಿದ್ದಾರೆ. ಆರೋಗ್ಯ ಮಾಹಿತಿ ಬಗ್ಗೆ ತಪ್ಪು ಮಾಹಿತಿ ನೀಡಿ ತಪ್ಪುದಾರಿಗೆಳೆಯುವ ನಟಿಯನ್ನು ದಿ ಲಿವರ್ ಡಾಕ್ ಟೀಕಿಸಿರುವುದು ಇದೇ ಮೊದಲಲ್ಲ. ಒಂದೆರಡು ವಾರಗಳ ಹಿಂದೆ ಅವರು, ಹೈಡ್ರೋಜನ್ ಪೆರಾಕ್ಸೈಡ್​ನ ಇನ್ಹಲೇಷನ್ ಅನ್ನು ಒಳಗೊಂಡಿರುವ ಪರ್ಯಾಯ ವೈದ್ಯಕೀಯ ಚಿಕಿತ್ಸೆಯನ್ನು ಸಮರ್ಥಿಸಿದಕ್ಕಾಗಿ ಸೌತ್​ ಬ್ಯೂಟಿ ಸಮಂತಾ ಅವರನ್ನು ಟೀಕಿಸಿದರು. (ಏಜೆನ್ಸೀಸ್​​)